ವಿದ್ಯಾರ್ಥಿಗಳ ಬಳಕೆಗಿಲ್ಲದ ಶೌಚಗೃಹ

2307-KRT-SHARANAPPA 2
Published on

ಕಾರಟಗಿ: ತಾಲೂಕಿನ ಮಾರುತಿ ಕ್ಯಾಂಪ್‌ನಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶೌಚಗೃಹವಿದ್ದರೂ ಬಳಕೆ ಯೋಗ್ಯವಾಗದಿದ್ದರಿಂದ ವಿದ್ಯಾರ್ಥಿಗಳು ಸಮಸ್ಯೆ ಅನುಭವಿಸುವಂತಾಗಿದೆ.

ಕ್ಯಾಂಪ್‌ನಲ್ಲಿ ಒಂದರಿಂದ ಐದನೇ ತರಗತಿವರೆಗೆ ಶಾಲೆಯಿದೆ. ಒಟ್ಟು 28 ವಿದ್ಯಾರ್ಥಿಗಳಿದ್ದಾರೆ. ಆದರೆ, ಶೌಚಕ್ಕೆ ತೆರಳಲು ಮಕ್ಕಳು ಪರದಾಡಬೇಕಿದೆ. ಏಕೆಂದರೆ ಶಾಲೆಯಲ್ಲಿ ನಿರ್ಮಾಣ ಮಾಡಲಾದ ಶೌಚಗೃಹ ಆಟಕ್ಕುಂಟು, ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ. ಬಾಗಿಲುಗಳಿಲ್ಲ. ಸಮರ್ಪಕ ನೀರಿನ ವ್ಯವಸ್ಥೆಯಿಲ್ಲ. ಬೇಕಾಬಿಟ್ಟಿ ನಿರ್ಮಾಣ ಮಾಡಿ, ಕೈ ಬಿಡಲಾಗಿದೆ. ಇನ್ನೂ ಶಾಲೆಯ ಸುತ್ತ ವಿಶಾಲ ಮೈದಾನವಿದೆ. ಅದರ ತುಂಬೆಲ್ಲ ಗಿಡ, ಕಂಟಿಗಳು ಬೆಳೆದಿವೆ. ಮಕ್ಕಳಿಗೆ ಸರಿಸೃಪಗಳ ಕಾಟ ಎದುರಾಗಾಗಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಶೌಚಕ್ಕೆ ತೆರಳಿದರೆ ಅವರ ಹಿಂದೆಯೇ ಶಾಲಾ ಅತಿಥಿ ಶಿಕ್ಷಕರು ತೆರಳಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ. ಮಕ್ಕಳ ಹಿತದೃಷ್ಟಿಯಿಂದ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಬೇಕು. ಶೀಘ್ರವೆ ಮಕ್ಕಳಿಗೆ ಸಮಸ್ಯೆಯಾಗದ ರೀತಿ ಕ್ರಮವಹಿಸಬೇಕು ಎನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.

-----

ಕೋಟ್

ಶಾಲೆಯಲ್ಲಿ ಶೌಚಗೃಹ ನಿರ್ಮಿಸಿಲು ಶಾಲಾ ಶಿಕ್ಷಣ ಇಲಾಖೆಯಿಂದ ಅನುದಾನವಿಲ್ಲ. ಮಾರುತಿ ಕ್ಯಾಂಪ್ ಶಾಲೆ ಗ್ರಾಮೀಣ ಪ್ರದೇಶದ ವ್ಯಾಪ್ತಿಗೆ ಬರುತ್ತದೆ. ಹೀಗಾಗಿ ಸಂಬಂಧಪಟ್ಟ ಅಲ್ಲಿನ ಗ್ರಾಪಂ ಅಧಿಕಾರಿಗಳಿಗೆ ಸೂಚಿಸಿ, ಶೀಘ್ರವೇ ಮಕ್ಕಳಿಗೆ ಸಮಸ್ಯೆ ಪರಿಹರಿಸಲು ಕ್ರಮವಹಿಸಲಾಗುವುದು.

ನಟೇಶ್

ಬಿಇಒ ಗಂಗಾವತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net