ಮಂದಿರ ಅಭಿವೃದ್ಧಿಗೆ ಅನುದಾನ ಭರವಸೆ

Satyanarayana Puja
ಕಾರಟಗಿಯ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಸತ್ಯನಾರಾಯಣ ಪೂಜಾ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಭಾಗಿಯಾಗಿ ದೇವರ ದರ್ಶನ ಪಡೆದರು.
Published on

ಕಾರಟಗಿ: ಪಟ್ಟಣದಲ್ಲಿ ಲಕ್ಷ್ಮೀ ವೆಂಕಟೇಶ್ವರ ಕಾರ್ತಿಕೋತ್ಸವ ನಿಮಿತ್ತ ಸತ್ಯನಾರಾಯಣ ಪೂಜೆ ಹಮ್ಮಿಕೊಂಡಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಶನಿವಾರ ಪೂಜೆಯಲ್ಲಿ ಭಾಗಿಯಾಗಿ ದೇವರ ದರ್ಶನ ಪಡೆದರು.

ಸಮುದಾಯದ ಮುಖಂಡ ಪ್ರಹ್ಲಾದ ಜೋಷಿ ನೇತೃತ್ವದಲ್ಲಿ ಸಾರ್ವಜನಿಕರು ಮಂದಿರ ಕಾಮಗಾರಿ ಬಗ್ಗೆ ಸಚಿವರ ಗಮನ ಸೆಳೆದರು. ಮಂದಿರ ಅಭಿವೃದ್ಧಿಗೆ ಕಂದಾಯ ಇಲಾಖೆ ಮುಂದಾಗಿದೆ. 8ಲಕ್ಷ ರೂ. ಸಾಲದು, ಹೆಚ್ಚುವರಿ 6ಲಕ್ಷ ರೂ. ಅನುದಾನ ಒದಗಿಸುವಂತೆ ಕೋರಿದರು.

ಸಚಿವ ಶಿವರಾಜ ತಂಗಡಗಿ ಮಾತನಾಡಿ, ಲಕ್ಷ್ಮೀ ವೆಂಕಟೇಶ್ವರ ದೇವಾಲಯದ ಪೂರ್ಣ ಪ್ರಮಾಣದ ಅಭಿವೃದ್ಧಿಗೆ ಸಹಕಾರ ನೀಡಲಾಗುವುದು. ಕಾಮಗಾರಿಗೆ ಬೇಕಾದ ಹೆಚ್ಚುವರಿ ಅನುದಾನ ಬಗ್ಗೆ ಕ್ರಿಯಾಯೋಜನೆ ಸಿದ್ಧಪಡಿಸಲು ತಹಸೀಲ್ದಾರ್ ಜತೆಗೆ ಚರ್ಚಿಸಿ, ಅಗತ್ಯ ಅನುದಾನ ನೀಡುವ ಭರವಸೆ ನೀಡಿದರು. ನನ್ನ ಅಧಿಕಾರಾವಧಿಯಲ್ಲಿ ಅನುದಾನ ನೀಡಲಾಗಿತ್ತು. ನಂತರ ಬಂದವರು ಅನುದಾನ ಒದಗಿಸದಿರುವುದರಿಂದ ಕಟ್ಟಡ ಅಪೂರ್ಣವಾಗಿದೆ. ಶೀಘ್ರವೇ ಯೋಜನಾ ವರದಿ ಮಾಡಿಸಿ, ಅಗತ್ಯ ಅನುದಾನ ಒದಗಿಸಲಾಗುವುದು ಎಂದರು.

ಪ್ರಮುಖರಾದ ಶರಣೇಗೌಡ ಮಾಲಿ ಪಾಟೀಲ್, ಉದ್ಯಮಿ ಸಿದ್ಧನಗೌಡ, ಅಯ್ಯಪ್ಪ ಉಪ್ಪಾರ, ಉದಯ ಕುಮಾರ ಈಡಿಗೇರ, ಹೊನಗುಡಿ ವೀರೇಂದ್ರ, ಮಂಜುನಾಥ ಮೇಗೂರ, ರಾಘು ರೇವಣಕರ, ಆಂಜನೇಯ ಯಾಡ್ಕಿ, ವಿಜಯಕುಮಾರ ಕೋಲ್ಕಾರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net