ನಿಮ್ಮೊಂದಿಗೆ ನಾವಿದ್ದೇವೆ.. ಧೈರ್ಯಗೆಡದಿರಿ, ಶಿವರಾಜ ತಂಗಡಗಿ ಸಾಂತ್ವನ

Condolences to family members
ಸಚಿವ ಶಿವರಾಜ ತಂಗಡಗಿ ಎದುರು ಪ್ರವೀಣ್ ಹೊಸಮನಿ ತಾಯಿ ಕಣ್ಣೀರು ಹಾಕಿದರು.
Published on

ಕಾರಟಗಿ: ಕುಂಭಮೇಳಕ್ಕೆ ತೆರಳಿ ಗೋರಖ್‌ಪುರದಲ್ಲಿ ಸಾವಿಗೀಡಾದ ತಾಲೂಕಿನ ಸಿದ್ದಾಪುರದ ಪ್ರವೀಣ್ ಹೊಸಮನಿ ನಿವಾಸಕ್ಕೆ ಸಚಿವ ಶಿವರಾಜ ತಂಗಡಗಿ ಗುರುವಾರ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಘಟನೆ ಸಂಬಂಧ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದೇನೆ. ಯುವಕನ ಮೃತದೇಹವನ್ನು ಅಲ್ಲಿಂದ ರಾಜ್ಯಕ್ಕೆ ತರಲು ಬೇಕಾಗಿರುವ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಾಗಿದೆ. ಪೊಲೀಸ್ ಇಲಾಖೆ ಒಬ್ಬ ಅಧಿಕಾರಿ, ಕಾರಟಗಿ ತಹಸೀಲ್ದಾರ್ ಎಂ.ಕುಮಾರಸ್ವಾಮಿ ಗೋರಖ್‌ಪುರಕ್ಕೆ ತೆರಳಲಿದ್ದಾರೆ. ಅಲ್ಲಿನ ಪ್ರತಿ ಮಾಹಿತಿ ಹಂಚಿಕೊಂಡಿದ್ದಾರೆ.

ಈಗಾಗಲೇ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಮೃತಪಟ್ಟ 48 ಗಂಟೆಗಳ ಒಳಗಾಗಿ ಕಾನೂನು ಪ್ರಕ್ರಿಯೆಗಳು ಪೂರ್ಣಗೊಂಡಿವೆ. ವಿಮಾನದಲ್ಲಿ ಮೃತದೇಹ ತರಬಹುದಿತ್ತು. ಆದರೆ, ಈಗಾಗಲೇ 48 ತಾಸಿಗೂ ಹೆಚ್ಚು ಸಮಯವಾಗಿದ್ದು, ತರಲು ಸಾಧ್ಯವಾಗಿಲ್ಲ. ಆದ್ದರಿಂದ ಆಂಬ್ಯುಲೆನ್ಸ್ ಮೂಲಕ ಗೋರಖ್‌ಪುರದಿಂದ ಸ್ವಗ್ರಾಮಕ್ಕೆ ಮೃತದೇಹ ತರಲಾಗುವುದು. ಕುಟುಂಬದವರು ಧೈರ್ಯ ತಂದುಕೊಳ್ಳಬೇಕು ಎಂದರು.

ಜಿಪಂ ಮಾಜಿ ಅಧ್ಯಕ್ಷ ವಿಶ್ವನಾಥ ರೆಡ್ಡಿ, ಉಪಾಧ್ಯಕ್ಷ ಬಿ. ಬಸವರಾಜಪ್ಪ, ತಾಪಂ ಮಾಜಿ ಸದಸ್ಯ ಬಸವರಾಜ ನೀರಗಂಟಿ, ತಾಪಂ ಮಾಜಿ ಅಧ್ಯಕ್ಷ ಪ್ರಕಾಶ್ ಭಾವಿ, ಮುಖಂಡರಾದ ಜನಗಂಡೆಪ್ಪ ಪೂಜಾರ್, ಕೆ.ಎನ್. ಪಾಟೀಲ್, ನಾಗೇಶ್ ಸಿಂಧನೂರು, ಚಂದ್ರಶೇಖರ ಗೌಡ ಪೊ.ಪಾ, ಕೆ. ಸಿದ್ದನಗೌಡ ಇದ್ದರು.

ಸಚಿವ ಮುಂದೆ ತಾಯಿ ಕಣ್ಣೀರು: ಪ್ರವೀಣ್ ಹೊಸಮನಿ ನಿವಾಸಕ್ಕೆ ಸಚಿವ ಶಿವರಾಜ ತಂಗಡಗಿ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳುವ ವೇಳೆ ಮೃತನ ತಾಯಿ ಕಣ್ಣೀರಿಟ್ಟರು. ನನ್ನ ಮಗ ಕುಟುಂಬಕ್ಕೆ ಆಸರೆಯಾಗಿದ್ದ. ಗ್ರಾಮದ ಎಲ್ಲರೊಡನೆ ಅನ್ಯೋನ್ಯವಾಗಿದ್ದ. ಈಗ ಇಂಥ ಪರಿಸ್ಥಿತಿ ಬಂದೋದಗಿದೆ. ಮನಸ್ಸಿಗೆ ದೊಡ್ಡ ಘಾಸಿಯಾಗಿದೆ ಎಂದು ಕಣ್ಣೀರಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net