

ಕಾರಟಗಿ: ಜನ ಸೇವೆ ಮಾಡಲು ಹಗಲಿರುಳು ದುಡಿಯುವ ಗುರುಪರಂಪರೆಯ ಮಠಗಳ ಸಮೀಪ ಯಾವತ್ತೂ ಜಾತಿ ಮತ್ತು ರಾಜಕಾರಣವನ್ನು ಸುಳಿಯದಂತೆ ನೋಡಿಕೊಳ್ಳಿ ಎಂದು ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಹೇಳಿದರು.
ತಾಲೂಕಿನ ಬೂದುಗುಂಪಾ ಗ್ರಾಮದ ಜಗದ್ಗುರು ಕೊಟ್ಟೂರು ಸ್ವಾಮಿ ಗುರುಪರಂಪರೆಯ ಶಾಖಾ ವಿರಕ್ತಮಠದ ಸಿದ್ಧೇಶ್ವರ ದೇಶಿಕರ ನಿರಂಜನ ಚರಪಟ್ಟಾಧಿಕಾರ ಮಹೋತ್ಸವ ನಿಮಿತ್ತ ಭಾನುವಾರ ಮಠದ ಆವರಣದಲ್ಲಿ ನಡೆದ 5001 ಮುತ್ತೈದೆಯರಿಗೆ ಉಡಿ ತುಂಬುವ ಹಾಗೂ ವಿವಿಧ ಕಾರ್ಯಕ್ರಮದಲ್ಲಿ ಮಾತನಾಡಿದರು. ಸನ್ಯಾಸಿ ನಿಮ್ಮ ಒಡಲಿನ ಮಗು. ಇವರನ್ನೂ ಗ್ರಾಮಸ್ಥರು ನೋಡಿಕೊಳ್ಳಬೇಕು. ಅನ್ನ, ಅಕ್ಷರ, ಆರೋಗ್ಯ ದಾಸೋಹ ನೀಡುವ ಶರಣ ಪರಂಪರೆ ಮಠಗಳು ವೈಭಯುತವಾಗಿ ಜನಸೇವೆ ಮಾಡುತ್ತಿದ್ದಾರೆ ಎಂದರು.
ಬೂದುಗುಂಪಾ, ತಿಮ್ಮಾಪುರ ಮತ್ತು ಹಾಲಸಮುದ್ರ ಗ್ರಾಮ ನೀರಾವರಿ ಭಾಗದಲ್ಲಿದೆ. ಇಲ್ಲಿನ ಜನರ ಸೇವೆಗೆ ಹಿರಿಯ ಶ್ರೀಗಳು ಸಿದ್ಧೇಶ್ವರ ಸ್ವಾಮೀಜಿಗಳನ್ನು ಕಳುಹಿಸಿದ್ದಾರೆ. ಸಮಾಜದ ಕೆಲಸಕ್ಕಾಗಿ, ಸದಾ ಭಕ್ತರಿಗಾಗಿ ಟೊಂಕ ಕಟ್ಟಿ ನಿಲ್ಲಲು ಸಿದ್ಧ ಇರುವವರೆ ಸಿದ್ಧೇಶ್ವರ ಎಂದರ್ಥ. ಸಿದ್ಧೇಶ್ವರ ಶ್ರೀಗಳು ಭಕ್ತರ ಏಳ್ಗಿಗಾಗಿ ಸದಾ ಕೆಲಸವನ್ನು ಮಾಡಲಿ ಎಂದು ಹಾರೈಸಿದರು. ಸನ್ಯಾಸಿ ಸಮಾಜದ ಸಾವಿರಾರು ತಂದೆ ತಾಯಿಗಳ ಮಗನಾಗಿರುತ್ತಾನೆ. ಸಮಾಜ ಸೇವೆಯೇ ಆತನ ಗುರಿ. ಬೂದಗುಂಪಾ ಭಾಗದ ಜನರ ಸೇವೆಗೆ ಬೆಳಕಾಗಿ ಸಿದ್ಧೇಶ್ವರ ಶ್ರೀಗಳು ಬರುತ್ತಿದ್ದಾರೆ. ಧಾರ್ಮಿಕ, ದಾಸೋಹ ಸಮಾಜ ಸೇವೆಗೆ ಭಕ್ತರು ಕೈ ಜೋಡಿಸಿ ಎಂದರು.
ಶಿರಹಟ್ಟಿಯ ಜಗದ್ಗುರು ಫಕೀರೇಶ್ವರ ದಿಂಗಾಲೇಶ್ವರ ಮಾತನಾಡಿ, ಈ ಪಟ್ಟಾಭಿಷೇಕ ಕಾರ್ಯಕ್ರಮ ತ್ರಿವಳಿ ಗ್ರಾಮದಲ್ಲಿ ದೊಡ್ಡ ಕ್ರಾಂತಿ ಮಾಡಿದೆ. ಈಗ ನಡೆಯುತ್ತಿರುವ ಕಾರ್ಯಕ್ರಮ ಈ ಹಿಂದೆ ಎಂದೂ ನಡೆದಿಲ್ಲ. ಮಠಗಳಿಗೆ ಕಿಂಚಿತ್ತೂ ಧಕ್ಕೆ ಬಾರದಂತೆ ಪೀಠಾಧಿಪತಿಗಳು ನೋಡಿಕೊಳ್ಳಬೇಕೆಂದು ಹೇಳಿದರು.ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ ಮಾತನಾಡಿದರು.
ಮುತ್ತೈದೆಯರಿಗೆ ಸೀರೆ, ಅಕ್ಕಿ ದಾನ ಮಾಡಿದ ಉದ್ಯಮಿಗಳಾದ ಕೆ. ನಾಗೇಶ್ವರರಾವ್, ಶಂಬಣ್ಣ ಸಾಹುಕಾರ ಹಂಚಿನಾಳ ಮತ್ತು ವೆಂಕಾರೆಡ್ಡಪ್ಪ ಚೆನ್ನಳ್ಳಿ, ಜಿ.ಲಿಂಗರಾಜ, ಸೇರಿದಂತೆ ಇನ್ನಿತರರನ್ನು ಶ್ರೀಗಳು ಸನ್ಮಾನಿಸಿದರು. ಜಗದ್ಗುರು ಕೊಟ್ಟೂರು ಬಸವಲಿಂಗ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.