

ಕಾರಟಗಿ: ಪಟ್ಟಣದ ಆರ್.ಜಿ.ಮುಖ್ಯರಸ್ತೆಯಿಂದ ಕೊಪ್ಪಳ ಗ್ರೀನ್ ಪವರ್ ಲಿಮಿಟೆಡ್(ಕೆಜಿಪಿಎಲ್) ಮುಂಭಾಗದಿಂದ ರೈಲ್ವೆ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಸಿಸಿ ರಸ್ತೆ ಕಾಮಗಾರಿ ಗುಣಮಟ್ಟವನ್ನು ಅಧಿಕಾರಿಗಳ ತಂಡ ಗುರುವಾರ ಪರಿಶೀಲನೆ ನಡೆಸಿತು.
ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ದಿಲೀಪ್‌ಕುಮಾರ್, ಭೂ ವಿಜ್ಞಾನಿ ಮಹೇಶ, ಜೆಇ ನವೀನ್‌ಕುಮಾರ ನೇತೃತ್ವದ ತಂಡ ಮೂರನೇ ದರ್ಜೆ ವ್ಯಕ್ತಿ(ಥರ್ಡ್‌ಪಾರ್ಟಿ)ಗಳ ಮೂಲಕ ರಸ್ತೆ ಕಾಮಗಾರಿ ಪರಿಶೀಲಿಸಿತು. ಅಗಲ, ಉದ್ದ, ದಪ್ಪ ಹಾಗೂ ಕಾಮಗಾರಿಗೆ ಬಳಸಿದ ವಸ್ತುಗಳ ಗುಣಮಟ್ಟ ಪರಿಶೀಲಿಸಿ ದಾಖಲಿಸಿಕೊಂಡಿತು. 358 ಮೀಟರ್ ಉದ್ದ, 6.3 ಮೀಟರ್ ಅಗಲ ಹಾಗೂ ಅಲ್ಲಲ್ಲಿ ಸಿಸಿ ರಸ್ತೆ ಬಿರುಕು ಬಿಟ್ಟಿರುವುದು ಪರಿಶೀಲನೆ ವೇಳೆ ತಂಡಕ್ಕೆ ಕಂಡುಬಂದಿದೆ. ಸಮಗ್ರ ವರದಿಯನ್ನು ಜಿಲ್ಲಾಧಿಕಾರಿಗೆ ಸಲ್ಲಿಸುವುದಾಗಿ ಅಧಿಕಾರಿಗಳ ತಂಡ ತಿಳಿಸಿತು.
ಥರ್ಡ್ ಪಾರ್ಟಿಗಳಾದ ಕಿರಣ್, ಮಹೇಶ, ಪ್ರಶಾಂತ, ಅಕ್ಕಿಗಿರಣಿ ಮಾಲೀಕರ ಸಂಘದ ಅಧ್ಯಕ್ಷ ಆರ್.ಜಿ.ಶ್ರೀನಿವಾಸ, ಕಾರ್ಯದರ್ಶಿ ಗುರುರಾಜ ಶ್ರೇಷ್ಠಿ, ಖಜಾಂಚಿ ಎನ್.ವೆಂಕಟೇಶ್ವರರಾವ್, ಪದಾಧಿಕಾರಿಗಳಾದ ಎನ್.ಸತೀಶ, ಎನ್.ಬಸವೇಶ್ವರರಾವ್, ಸುರೇಶ, ಆದಿ ನಾರಯಣ ಇತರರಿದ್ದರು.
ಜಿಲ್ಲಾ ಖನಿಜ ಪ್ರತಿಷ್ಠಾನ ನಿಧಿ(2021)ಯಿಂದ ಸಿಸಿ ರಸ್ತೆ ನಿರ್ಮಾಣಕ್ಕೆ 85 ಲಕ್ಷ ರೂ. ಮೀಸಲಿರಿಸಿತ್ತು. 2022ರ ಜು.12ರಂದು 42.50 ಲಕ್ಷ ರೂ. ಅನುದಾನ ಬಿಡುಗಡೆಗೊಂಡಿದ್ದು ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತ(ಕೆಆರ್‌ಐಡಿಎಲ್) ಇಂಜಿನಿಯರ್ ಅಂದಾಜು ಪತ್ರಿಕೆಯ ಮಾನದಂಡಗಳನ್ನು ಉಲ್ಲಂಘಿಸಿ ಕಾಮಗಾರಿ ನಿರ್ವಹಿಸುತ್ತಿದ್ದರು. ಈ ಕುರಿತು ವಿಜಯವಾಣಿ ಮಾ.2ರಂದು ‘ರೈಲ್ವೆ ನಿಲ್ದಾಣದ ರಸ್ತೆ ಕಳಪೆ!’ ಎನ್ನುವ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿದ್ದನ್ನು ಇಲ್ಲಿ ಸ್ಮರಿಸಬಹುದು.