

ಕಾರಟಗಿ: ಇಲ್ಲಿನ ವಿಶೇಷ ಎಪಿಎಂಸಿ ಮಾಜಿ ಸದಸ್ಯ ಶರಣೇಗೌಡ ಪಾಟೀಲ್ ಸಾಹುಕಾರ ಗುಂಡೂರು, ಮಗಳ ಮದುವೆಯಲ್ಲಿ ಬಂದ ಆಯರದ ಒಟ್ಟು ಮೊತ್ತವನ್ನು ಕೊಪ್ಪಳ ಗವಿಮಠದಿಂದ ನಿರ್ಮಾಣವಾಗುತ್ತಿರುವ 5 ಸಾವಿರ ಮಕ್ಕಳ ವಸತಿ ನಿಲಯಕ್ಕೆ ಭಾನುವಾರ ದೇಣಿಗೆ ನೀಡಿದ್ದಾರೆ.
ರಾಯಚೂರು ಜಿಲ್ಲೆ ಸಿಂಧನೂರು ತಾಲೂಕು ಸಾಸಲಮರಿ ಗ್ರಾಮದ ಸಿ.ಅಭಿನಯ ಜೊತೆ ಚೈತ್ರಾ ಪಾಟೀಲ್ ಮದುವೆ ಜೂ.23ರಂದು ನಡೆದಿದೆ. ಅಂದೇ ಕೊಪ್ಪಳದಲ್ಲಿ ಅಭಿನವ ಗವಿಸಿದ್ಧೇಶ್ವರ ಶ್ರೀಗಳು ಮಠದಲ್ಲಿ ನೂತನ ವಸತಿ ನೀಲಯಕ್ಕೆ ಭೂಮಿ ಪೂಜೆ ನೆರವೇರಿಸಿದ್ದರು. ಆಗ ಶ್ರೀಗಳು ಮಾತನಾಡುವ ವೇಳೆ ಹಿರಿಯ ಶ್ರೀಗಳು ವಿದ್ಯಾರ್ಥಿಗಳನ್ನು ಓದಿಸಲು ಪಟ್ಟ ಪಡಿಪಾಟಲು ನೆನೆದು ಭಾವುಕರಾಗಿ ಕಣ್ಣೀರಿಟ್ಟಿದ್ದರು. ಅದು ಸಾಮಾಜಿಕ ಜಾಲತಾಣಗಳ ಮೂಲಕ ನಾಡಿನೆಲ್ಲೆಡೆ ಪಸರಿಸಿತು. ಇದನ್ನು ಮನಗಂಡ ಶರಣೇಗೌಡ ಪಾಟೀಲ್, ಮಗಳ ಮದುವೆಯಲ್ಲಿ ಬಂದ ಆಯರದ ಒಟ್ಟು ಹಣವನ್ನು ಗವಿಮಠದ ನೂತನ ವಸತಿ ನಿಲಯಕ್ಕೆ ದೇಣಿಗೆ ನೀಡುವ ಸಂಕಲ್ಪ ಮಾಡಿದ್ದರು. ಅದರಂತೆಯೇ ನೂತನ ದಂಪತಿ ಹಾಗೂ ಕುಟುಂಬ ಸಮೇತರಾಗಿ ಗವಿಮಠಕ್ಕೆ ತೆರಳಿ ಶ್ರೀಗಳಿಗೆ ದೇಣಿಗೆ ನೀಡಿದ್ದಾರೆ. ನವದಂಪತಿಯನ್ನು ಶ್ರೀಗಳು ಹಾರೈಸಿದರು. ಶಿವಶರಣೇಗೌಡ ಯರಡೋಣ, ಶಿಕ್ಷಕ ಬಸವರಾಜ ಹೊಸಮನಿ ಇತರರಿದ್ದರು.