ಗವಿಮಠದ ಜಾತ್ರೆಗೆ 25ಸಾವಿರ ಶೇಂಗಾ ಹೋಳಿಗೆ

GAVI MATHA
ಕಾರಟಗಿಯ ಕೆರೆಬಸವೇಶ್ವರ ಕಲ್ಯಾಣಮಂಟಪದಲ್ಲಿ ಗವಿಮಠದ ಜಾತ್ರೆಯ ದಾಸೋಹಕ್ಕೆ ಶೇಂಗಾ ಹೋಳಿಗೆ ಸಿದ್ಧಪಡಿಸುತ್ತಿರುವುದು.
Published on

ಕಾರಟಗಿ: ಕೊಪ್ಪಳ ಗವಿಮಠದ ಶ್ರೀ ಗವಿಸಿದ್ಧೇಶ್ವರ ಜಾತ್ರೆಯ ದಾಸೋಹಕ್ಕೆ ಭಕ್ತರು 25ಸಾವಿರಕ್ಕೂ ಅಧಿಕ ಶೇಂಗಾ ಹೋಳಿಗೆ ಸಿದ್ಧಪಡಿಸಿದ್ದಾರೆ.
ಸಿಂಧನೂರು ತಾಲೂಕಿನ ಶ್ರೀಮಠದ ಭಕ್ತರು ನಾಲ್ಕು ಕ್ವಿಂಟಾಲ್ ಶೇಂಗಾ, ನಾಲ್ಕು ಕ್ವಿಂಟಾಲ್ ಬೆಲ್ಲ ಹಾಗೂ ಮೂರು ಕ್ವಿಂಟಾಲ್ ಮೈದಾ ಹಿಟ್ಟು ನೀಡಿದ್ದಾರೆ.

ಪಟ್ಟಣದ ಪುರಸಭೆ ಸದಸ್ಯರಾದ ಸೋಮಶೇಖರ ಭೇರ್ಗಿ, ಬಸವರಾಜ ಕೊಪ್ಪದ ನೇತೃತ್ವದ ರವಿಕುಮಾರ ಕಂದಗಲ್, ಮುತ್ತು ದರೋಜಿ, ಬಸವರಾಜ ಸಜ್ಜನ್, ಶರಣಯ್ಯಸ್ವಾಮಿ ಖಾನಾವಳಿ, ಮಲ್ಲಯ್ಯಸ್ವಾಮಿ ನಾಗನಕಲ್, ವಿಜಯಕುಮಾರ ಹಿರೇಮಠ ಚನ್ನಳ್ಳಿ ಯುವಕರ ತಂಡ ಜ.19, 20, 21 ಹಾಗೂ 22ರಂದು ಸತತ ನಾಲ್ಕುದಿನಗಳ ಕಾಲ ಶೇಂಗಾ ಹೋಳಿಗೆ ಸಿದ್ಧಪಡಿಸಲು ಶ್ರಮಿಸಿದ್ದಾರೆ.

ಟ್ಟಣದ ಕೆರೆಬಸವೇಶ್ವರ ಕಲ್ಯಾಣ ಮಂಟಪ ಹಾಗೂ ಶ್ರೀಶರಣಬಸವೇಶ್ವರ ದೇವಾಸ್ಥನದಲ್ಲಿ ಪ್ರತ್ಯೇಕ ಎರಡು ತಂಡಗಳಿಂದ ಹೋಳಿಗೆ ಸಿದ್ಧಪಡಿಸುವ ಕಾರ್ಯ ಏರ್ಪಡಿಸಲಾಗಿತ್ತು. ವಿವಿಧ ವಾರ್ಡ್‌ಗಳ 40ಕ್ಕೂ ಅಧಿಕ ಮಹಿಳೆಯರು ಸ್ವಯಂಪ್ರೇರಿತವಾಗಿ ಪಾಲ್ಗೊಂಡು ಹೋಳಿಗೆ ತಯಾರಿಸುವ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ. ಅಲ್ಲದೇ ಬಸವರಾಜ ಪವಾಡಶೆಟ್ಟಿ ಎಂಬುವವರು ಉಚಿತವಾಗಿ ನಾಲ್ಕುದಿನ ಹಗಲು-ರಾತ್ರಿ ಎನ್ನದೇ ಬೆಲ್ಲ ಮತ್ತು ಶೇಂಗಾ ಹೂರಣ ಸಿದ್ಧಪಡಿಸಿಕೊಡುವ ಸೇವೆ ಸಲ್ಲಿಸಿದ್ದಾರೆ. ಸತ್ಕಾರ್ಯದಲ್ಲಿ ಪಾಲ್ಗೊಂಡ ಮಹಿಳೆಯರಿಗೆ ಬೆಳಗ್ಗೆ ಟಿಫನ್, ಮಧ್ಯಾಹ್ನ ಊಟ, ಚಹಾ, ಎಲೆ, ಅಡಿಕೆಯನ್ನು ಯುವಕರು ವ್ಯವಸ್ಥೆ ಮಾಡಿದ್ದು ವಿಶೇಷ.

ಸಿದ್ಧಪಡಿಸಿದ ಸಾವಿರಾರು ಹೋಳಿಗೆಗಳನ್ನು ಒಣಗಿಸಲು ಹಾಕಿದ್ದು ಕಾಯಲು ಯುವಕರನ್ನು ನೇಮಿಸಲಾಗಿದೆ. ಹೋಳಿಗೆ ತುಂಬಲು ಸಿಂಧನೂರಿನಿಂದಲೇ ಟ್ರೇಗಳನ್ನು ಕಳುಹಿಸಿಕೊಟ್ಟಿದ್ದು ಅವುಗಳಲ್ಲಿ ಸಂಗ್ರಹಿಸಲಾಗುವುದು.

ಏಳು ವರ್ಷಗಳ ನಿರಂತರ ಸೇವೆ

ಸಿಂಧನೂರು ತಾಲೂಕಿನ ಶ್ರೀಮಠದ ಭಕ್ತರಾದ ವಿಜಯಕುಮಾರ ಗುಡಿಹಾಳ, ವೀರೇಶ ಸಾನಬಾಳ, ವೀರಭದ್ರಗೌಡ ಖಾನಿಹಾಳ, ಈಶ್ವರ್ ವಕೀಲರು, ಕೆ.ಶರಣಪ್ಪ ಸುಕಾಲಪೇಟೆ, ಮಹೇಶ ಸೌದ್ರಿ, ಪ್ರಶಾಂತ ಇಟ್ನಾಳ, ವಿಶ್ವನಾಥರೆಡ್ಡಿ ಅಮಿನಗಡ, ಶರಣೇಗೌಡ ತಿಡಿಗೋಳ, ಬಸವರಾಜ ಮಸ್ಕಿ ಇತರ ಭಕ್ತರ ಸಮೂಹ ಕಳೆದ ಏಳು ವರ್ಷಗಳಿಂದ ಜಾತ್ರೆಯ ದಾಸೋಹಕ್ಕೆ ಶೇಂಗಾ ಹೋಳಿಗೆ ಸಿದ್ಧಪಡಿಸಿ ಕಳುಹಿಸಿಕೊಡುತ್ತಿದೆ. ಈ ವರ್ಷ ನೂರು ಕ್ವಿಂಟಲ್ ಶೇಂಗಾ ಹೋಳಿಗೆ ಸಿದ್ಧಪಡಿಸಿ ಕಳುಹಿಸುವ ಗುರಿ ಹೊಂದಿದ್ದು ಕಾರಟಗಿ ಪಟ್ಟಣದಲ್ಲೇ 11ಕ್ವಿಂಟಲ್ ಸಿದ್ಧಪಡಿಸಲಾಗಿದೆ. ಇನ್ನುಳಿದಿದ್ದನ್ನು ಸಿಂಧನೂರು ತಾಲೂಕಿನಲ್ಲಿ ಸಿದ್ಧಪಡಿಸಲಾಗುತ್ತಿದೆ. ಪೂರ್ಣಗೊಂಡ ಬಳಿಕ ಕಂಟೇನರ್ ಮೂಲಕ ಶ್ರೀಮಠಕ್ಕೆ ಕಳುಹಿಸಿಕೊಡಲಾಗುತ್ತದೆ.

ಸಿಂಧನೂರು ತಾಲೂಕಿನ ಭಕ್ತರು ಧಾನ್ಯ ಕೊಡಿಸಿದ್ದಾರೆ. ಇಲ್ಲಿನ ಕೆಲ ಗೆಳೆಯರು, ಭಕ್ತರು, ಮಹಿಳೆಯರು ಸೇರಿ ಸತತ ನಾಲ್ಕುದಿನಗಳ ಕಾಲ ಸ್ವಯಂಪ್ರೇರಣೆಯಿಂದ ಹೋಳಿಗೆ ಸಿದ್ಧಪಡಿಸಿದ್ದೇವೆ. ಒಣಗಿದ ಬಳಿಕ ಟ್ರೇನಲ್ಲಿ ಹಾಕಿ ಇಡುತ್ತೇವೆ. ಧಾನ್ಯಕೊಡಿಸಿದ ಭಕ್ತರೇ ಕಂಟೇನರ್ ತಂದು ಶ್ರೀಮಠಕ್ಕೆ ತೆಗೆದುಕೊಂಡು ಹೋಗುತ್ತಾರೆ. ಅಜ್ಜನ ಸೇವೆ ಮಾಡುವ ಅವಕಾಶ ದೊರಕಿರುವುದೇ ನಮ್ಮ ಭಾಗ್ಯ. ನಮ್ಮದೇನಿದ್ದರು ಅಲ್ಪಸೇವೆ.ಸೋಮಶೇಖರ ಭೇರ್ಗಿಪುರಸಭೆ ಸದಸ್ಯ, ಕಾರಟಗಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net