

ಕಾರಟಗಿ: ತುಂಗಭದ್ರಾ ಜಲಾಶಯಕ್ಕೆ ಸೆ.9 ಮತ್ತು 10ರಂದು ಆಗಮಿಸಿರುವ ಕೇಂದ್ರ ಜಲ ಆಯೋಗ ಟಿಬಿ ಬೋರ್ಡ್‌ನ್ನು ವಿಜಯನಗರಕ್ಕೆ(ಹೊಸಪೇಟೆ) ಸ್ಥಳಾಂತರಿಸಲು ಕೇಂದ್ರ ಸರ್ಕಾರಕ್ಕೆ ಸಲ್ಲಿಸುವ ವರದಿಯಲ್ಲಿ ಉಲ್ಲೇಖಿಸಬೇಕು ಎಂದು ಕರ್ನಾಟಕ ರೈತ ಜನ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ವೀರನಗೌಡ ಮಾಲಿಪಾಟೀಲ್ ಆಗ್ರಹಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ಸೋಮವಾರ ಮಾತನಾಡಿ, ರಾಜ್ಯದ ಎರಡನೇ ಅತಿ ದೊಡ್ಡ ಜಲಾಶಯವೆಂದು ಖ್ಯಾತಿ ಪಡೆದ ತುಂಗಭದ್ರಾ ಜಲಾಶಯ 1953ರಲ್ಲಿ ಲೋಕಾರ್ಪಣೆಗೊಂಡಿದೆ. ಜಲಾಶಯದ 1ರಿಂದ 17ರವರೆಗಿನ ಗೇಟ್‌ಗಳನ್ನು ಟಿಬಿ ಬೋರ್ಡ್ ನಿರ್ವಹಣೆ ಮಾಡಿದರೆ 18ರಿಂದ 33ರವರೆಗೆ ಕಾಡಾ ಅಧಿಕಾರಿಗಳು ನಿರ್ವಹಣೆ ಮಾಡುತ್ತಾರೆ. ಆಗಸ್ಟ್ ತಿಂಗಳಲ್ಲಿ 19ನೇ ಗೇಟ್ ಗಿತ್ತುಹೋಗಿದ್ದರಿಂದ ಜಲಾಶಯದಲ್ಲಿನ 40ರಿಂದ 50ಟಿಎಂಸಿ ನೀರು ಪೋಲಾಯಿತು. ಗೇಟ್ ನಿರ್ವಹಣೆಗೆ ಟಿಬಿ ಬೋರ್ಡ್ 15ದಿನಗಳ ಕಾಲಾವಕಾಶ ತೆಗೆದುಕೊಳ್ಳಲಿದೆಯೆಂದು ಹೇಳಿದ್ದರು.
ಆದರೆ, ಕೊಪ್ಪಳ, ರಾಯಚೂರು, ವಿಜಯನಗರ, ಬಳ್ಳಾರಿ ಜಿಲ್ಲೆಗಳ ಜನಪ್ರತಿನಿಧಿಗಳು ಮುತುವರ್ಜಿವಹಿಸಿ ಸರ್ಕಾರದೊಂದಿಗೆ ಸಮನ್ವಯತೆ ಸಾಧಿಸಿ ತಜ್ಞ ಕನ್ನಯ್ಯ ನಾಯ್ಡು ನೇತೃತ್ವದಲ್ಲಿ ತಾತ್ಕಾಲಿಕ ಯಶಸ್ವಿ ಕಂಡಿದೆ. ಇದರಿಂದಾಗಿ ನಾಲ್ಕು ಜಿಲ್ಲೆಗಳ ಸಾವಿರಾರು ರೈತರು ನಿಟ್ಟುಸಿರು ಬಿಡುವಂತಾಗಿದೆ. ಈಗ ಮತ್ತೊಮ್ಮೆ ಜಲಾಶಯ ತುಂಬುವ ಹಂತಕ್ಕೆ ತಕಲುಪಿದ್ದು ಎರಡನೇ ಬೆಳೆಗೆ ನೀರು ದೊರೆಯಲಿದೆ ಎಂದು ತಿಳಿಸಿದರು.
ಸ್ವಾತಂತ್ರ್ಯಪೂರ್ವದಲ್ಲಿ ಕಲ್ಯಾಣ ಕರ್ನಾಟಕದ 5 ಜಿಲ್ಲೆಗಳು ಹೈದರಾಬಾದ್ ಪ್ರಾಂತ್ಯಕ್ಕೆ ಸೇರ್ಪಡೆಗೊಂಡಿದ್ದವು. 1953ರಲ್ಲಿ ಲೋಕಾರ್ಪಣೆಗೊಂಡ ಜಲಾಶಯ ಬೋರ್ಡ್‌ನ್ನು ಹೈದರಾಬಾದ್‌ನಲ್ಲಿ ನಿರ್ಮಿಸಲಾಯಿತು. ಕರ್ನಾಟಕ ಏಕೀಕರಣದ ಬಳಿಕ ಟಿಬಿ ಬೋರ್ಡ್‌ನ್ನು ಕರ್ನಾಟಕಕ್ಕೆ ಸ್ಥಳಾಂತರಿಸಬೇಕಿತ್ತು. ಈಗ ತುಂಗಭದ್ರಾ ಜಲಾಶಯದ 19ನೇ ಗೇಟ್ ಪರಿಶೀಲನೆಗೆ ಕೇಂದ್ರದ ಜಲ ಆಯೋಗ ಆಗಮಿಸಿದೆ. ಸೆ.9 ಮತ್ತು 10ರಂದು ತಂಡ ಜಲಾಶಯದ ಗೇಟ್ ಸೇರಿ ಪ್ರಮುಖ ವಿಷಯಗಳ ಕುರಿತು ಅಧ್ಯಯನ ನಡೆಸಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ.
ಆದ್ದರಿಂದ ಹೈದರಾಬಾದ್‌ನಲ್ಲಿರುವ ಟಿಬಿ ಬೋರ್ಡ್‌ನ್ನು ಕೂಡಲೇ ರಾಜ್ಯಕ್ಕೆ ಸ್ಥಳಾಂತರಿಸಲು ಆಯೋಗ ಕೇಂದ್ರ ಸರ್ಕಾರಕ್ಕೆ ಸಲ್ಲಿಸುವ ವರದಿಯಲ್ಲಿ ಉಲ್ಲೇಖಿಸಬೇಕು. ಸೆ.10ರಂದು ವಿವಿಧ ರೈತ ಸಂಘಗಳ ಸಹಯೋಗದೊಂದಿಗೆ ಮನವಿಪತ್ರ ಸಲ್ಲಿಸಲಾಗುವುದು. ರೈತ ಸಂಘಗಗಳು ಜತೆಯಾಗಬೇಕು ಎಂದು ಮನವಿಮಾಡಿಕೊಂಡರು. ರೈತ ಮುಖಂಡ ಚಂದ್ರಶೇಖರ ಕೋಲ್ಕಾರ್ ಇತರರಿದ್ದರು.