300 ಇಂದಿರಾ ಕ್ಯಾಂಟೀನ್ ಆರಂಭಕ್ಕೆ ಕ್ರಮ

Karatagi indira canteen opening cermanoy
ಕಾರಟಗಿಯಲ್ಲಿ ಭಾನುವಾರ ಇಂದಿರಾ ಕ್ಯಾಂಟೀನ್ ಉದ್ಘಾಟಿಸಿ ಸಚಿವ ಶಿವರಾಜ ತಂಗಡಗಿ ಹಾಗೂ ಮುಖಂಡರು ಉಪಹಾರ ಸವಿದರು. ಪುರಸಭೆ ಅಧ್ಯಕ್ಷೆ ರೇಖಾ ಆನೆಹೊಸೂರು, ಉಪಾಧ್ಯಕ್ಷೆ ಗಂಗಮ್ಮ, ಸ್ಥಾಯಿಸಮಿತಿ ಅಧ್ಯಕ್ಷ ಈಶಪ್ಪ ಇಟ್ಟಂಗಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ರೆಡ್ಡಿ ಶ್ರೀನಿವಾಸ ಇತರರಿದ್ದರು.
Published on

ಕಾರಟಗಿ: ಬಡವರ ಹಸಿವು ನೀಗಿಸಲು ಸರ್ಕಾರದಿಂದ ರಾಜ್ಯದಲ್ಲಿ ಪ್ರಸಕ್ತ ಬಾರಿ 300 ಇಂದಿರಾ ಕ್ಯಾಂಟೀನ್‌ಗಳನ್ನು ಆರಂಭಿಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಮಾಹಿತಿ ನೀಡಿದರು.

ಪಟ್ಟಣದ ಹೊಸ ಬಸ್ ನಿಲ್ದಾಣ ಬಳಿ ಇಂದಿರಾ ಕ್ಯಾಂಟೀನ್‌ಗೆ ಭಾನುವಾರ ಚಾಲನೆ ನೀಡಿ ಮಾತನಾಡಿ, ರಾಜ್ಯ ಸರ್ಕಾರ ಬಡವರಿಗೆ, ದುಡಿವ ವರ್ಗಗಳಿಗೆ ನ್ಯಾಯ ಒದಗಿಸಲು ಸಾಕಷ್ಟು ಯೋಜನೆಗಳನ್ನು ರೂಪಿಸಿದೆ. ಹೋಟೆಲ್‌ಗಳಲ್ಲಿನ ಆಹಾರಕ್ಕೂ ಜಿಎಸ್‌ಟಿ ಕಟ್ಟುವ ದುಸ್ಥಿತಿಯ ನಡುವೆ 5, 10 ರೂ.ಗಳಲ್ಲಿ ಬಡವರಿಗೆ ಹೊಟ್ಟೆ ತುಂಬಾ ಅನ್ನ ನೀಡುವ ಯೋಜನೆ ಜಾರಿಗೊಳಿಸಲಾಗಿದೆ. ದಿನನಿತ್ಯ ಸುಮಾರು 300 ಜನರಿಗೆ ಬೆಳಗ್ಗೆ ಉಪಹಾರ ಮಧ್ಯಾಹ್ನ ಮತ್ತು ರಾತ್ರಿ ಊಟ ನೀಡಲಾಗುತ್ತಿದ್ದು, ಅಗತ್ಯವಿದ್ದಲ್ಲಿ ಹೆಚ್ಚಿನ ಜನತೆಗೂ ಪೂರೈಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಪ್ರಸಕ್ತ ವರ್ಷದಲ್ಲಿ ಕ್ಷೇತ್ರಕ್ಕೆ ನೂರಾರು ಕೋಟಿ ರೂ.ಗಳ ಅನುದಾನ ತರಲಾಗಿದೆ. ಕೆಕೆಆರ್‌ಡಿಬಿ, ಮುಖ್ಯಮಂತ್ರಿಗಳ ವಿಶೇಷ ಅನುದಾನ ಸೇರಿದಂತೆ ನಾನಾ ಮೂಲಗಳಿಂದ ಸುಮಾರು 200 ಕೋಟಿ ರೂ.ಗಳಲ್ಲಿ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲಾಗುತ್ತಿದೆ. ಕ್ಷೇತ್ರದಲ್ಲಿ ಶೇ.90 ರಸ್ತೆಗಳ ಅಭಿವೃದ್ಧಿಯ ಜತೆಗೆ ಶಾಲೆಗಳಿಗೆ ಮೂಲಸೌಕರ್ಯ ಒದಗಿಸಲಾಗುವುದು. ಇನ್ನು 18 ಕೋಟಿ ರೂ.ಗಳಲ್ಲಿ ಪಟ್ಟಣದಲ್ಲಿ ಮುಖ್ಯ ಹೆದ್ದಾರಿಯಲ್ಲಿ ರಸ್ತೆ ವಿಭಜಕ ನಿರ್ಮಿಸಿ ವಿದ್ಯುತ್ ದೀಪಗಳ ಅಳವಡಿಕೆ, 1.50 ಕೋಟಿ ರೂ.ಗಳಲ್ಲಿ ಪುಷ್ಕರಣಿ ಅಭಿವೃದ್ಧಿ ಸೇರಿದಂತೆ ನಾನಾ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಪಟ್ಟಣದಲ್ಲಿ ಆಟೋ ಸ್ಟ್ಯಾಂಡ್ ಉದ್ಘಾಟಿಸಲಾಯಿತು. ಇದಕ್ಕೂ ಮುನ್ನ ತಲಾ 1 ಕೋಟಿ ರೂ.ಗಳ ನವಲಿ-ಕಲ್ಮಂಗಿ ರಸ್ತೆ, ಆರ್.ಜಿ.ರಾಜ್ಯಹೆದ್ದಾರಿಯಿಂದ ಬರಗೂರು- ಕುಂಟೋಜಿ-ಮರಳಿ ರಸ್ತೆ, 1.03 ಕೋಟಿ ರೂ.ಗಳಲ್ಲಿ ಪಟ್ಟಣದ ಕೆಪಿಎಸ್ ಶಾಲೆಯಲ್ಲಿ 5 ಕೊಠಡಿ ಹಾಗೂ 1.57 ಕೋಟಿ ರೂ.ಗಳಲ್ಲಿ ನಂದಿಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ 10 ಕೊಠಡಿಗಳ ನಿರ್ಮಾಣಕ್ಕೆ ಚಾಲನೆ ನೀಡಿದರು.

ಪುರಸಭೆ ಅಧ್ಯಕ್ಷೆ ರೇಖಾ ಆನೆಹೊಸೂರು, ಉಪಾಧ್ಯಕ್ಷೆ ಗಂಗಮ್ಮ, ಸ್ಥಾಯಿಸಮಿತಿ ಅಧ್ಯಕ್ಷ ಈಶಪ್ಪ ಇಟ್ಟಂಗಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ರೆಡ್ಡಿ ಶ್ರೀನಿವಾಸ, ಪ್ರಮುಖರಾದ ಶಿವರೆಡ್ಡಿ ನಾಯಕ, ಪ್ರಕಾಶ ಬಾವಿ, ತಹಸೀಲ್ದಾರ್ ಎಮ್.ಕುಮಾರಸ್ವಾಮಿ, ತಾಪಂ ಇಒ ಲಕ್ಷ್ಮೀದೇವಿ, ಪುರಸಭೆ ಮುಖ್ಯಾಧಿಕಾರಿ ಸಾಬಣ್ಣ ಕಟ್ಟೀಕಾರ್ ಇತರರಿದ್ದರು.

ಕಾರಟಗಿ ಪಟ್ಟಣದಲ್ಲಿ ಪ್ರಜಾಸೌಧ ನಿರ್ಮಾಣ ಟೆಂಡರ್ ಹಂತದಲ್ಲಿದೆ. ಇನ್ನುಳಿದಂತೆ ಬಸ್ ಡಿಪೋ, 100 ಹಾಸಿಗೆಗಳ ಆಸ್ಪತ್ರೆ, ನ್ಯಾಯಾಲಯ ನಿರ್ಮಾಣಕ್ಕೆ ಟೆಂಡರ್ ಪೂರ್ಣಗೊಂಡಿದೆ. ಶೀಘ್ರದಲ್ಲೇ ಕಾಮಗಾರಿ ಆರಂಭಿಸಲಾಗುವುದು. | ಶಿವರಾಜ ತಂಗಡಗಿಜಿಲ್ಲಾ ಉಸ್ತುವಾರಿ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net