

ಕಾರಟಗಿ: ಜಗತ್ತಿಗೆ ಮಾದರಿಯಾಗಿರುವ ಪ್ರಜಾಪ್ರಭುತ್ವ ಹೊಂದಿರುವ ಭಾರತದಲ್ಲಿ ಅಸ್ಪಶ್ಯತೆ ಪಿಡುಗಾಗಿ ಪರಿಣಮಿಸಿದೆ. ಅಸ್ಪಶ್ಯತೆ ನಿವಾರಣೆಗೆ ಸರ್ಕಾರದ ಜತೆಗೆ ಪ್ರಜ್ಞಾವಂತರು ಕೈ ಜೋಡಿಸಬೇಕು ಎಂದು ತಹಸೀಲ್ದಾರ್ ರವಿ ಅಂಗಡಿ ಹೇಳಿದರು.
ತಾಲೂಕಿನ ಹುಳ್ಕಿಹಾಳ ಗ್ರಾಮದಲ್ಲಿ ವಿವಿಧ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಅಸ್ಪಶ್ಯತೆ ನಿರ್ಮೂಲನೆ ಅರಿವು ಕಾರ್ಯಕ್ರಮವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು. ಸಮಾಜದಲ್ಲಿ ಸುಶಿಕ್ಷಿತರ ಸಂಖ್ಯೆ ಹೆಚ್ಚಾಗುತ್ತಿದೆ. ಪ್ರಜ್ಞಾವಂತ ಯುವಜನರು ಜಾತಿ-ಮತಗಳನ್ನು ಮರೆತು ಸೌಹಾರ್ದಯುತ ಬಾಳ್ವೆ ನಡೆಸಲು ಸೇತುವೆಯಾಗಿ ಕೆಲಸ ಮಾಡಬೇಕಿದೆ ಎಂದರು.
ಪರಿಶಿಷ್ಟ ಜಾತಿ ಹಾಗೂ ಪಂಗಡದ ಸಮುದಾಯದವರು ವಾಸಿಸುವ ಕಾಲನಿಗಳಿಗೆ ತೆರಳಿ ಸಮಸ್ಯೆಗಳ ಮಾಹಿತಿ ಪಡೆದುಕೊಳ್ಳಲಾಯಿತು. ಹೋಟೆಲ್ ಹಾಗೂ ಅಂಗಡಿಗಳಲ್ಲಿ ಅಸ್ಪಶ್ಯತೆ ನಿರ್ಮೂಲನೆ ಬಗ್ಗೆ ಕರಪತ್ರಗಳನ್ನು ನೀಡಿ ಅರಿವು ಮೂಡಿಸಲಾಯಿತು.