ಅರ್ಧಕ್ಕೆ ನಿಂತ ಹೈಟೆಕ್ ಶೌಚಗೃಹ ಕಾಮಗಾರಿ, ಕಾರಟಗಿಯ 22ನೇ ವಾರ್ಡ್ ನಿವಾಸಿಗಳಿಗೆ ತೊಂದರೆ

Hi-tech public toilet construction
ಕಾರಟಗಿಯಲ್ಲಿ ಹೈಟೆಕ್ ಶೌಚಗೃಹ ನಿರ್ಮಾಣದ ಕಾರ್ಯ ಅರ್ಧಕ್ಕೆ ನಿಂತಿರುವುದು.
Published on

ಕಾರಟಗಿ: ಪಟ್ಟಣದ 22ನೇ ವಾರ್ಡ್‌ನ ಹೈಟೆಕ್ ಸಾರ್ವಜನಿಕ ಶೌಚಗೃಹ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ಪೂರ್ಣಗೊಳಿಸುವಂತೆ ವಾರ್ಡ್‌ನ ಮಹಿಳೆಯರು ಆಗ್ರಹಿಸಿದ್ದಾರೆ.

ಪಟ್ಟಣದ ಅಬ್ದುಲ್ ನಜೀರ್ ಸಾಬ್ ಕಾಲನಿ ಮೇಲೆ ಹಾದು ಹೋಗಿರುವ 31ನೇ ವಿತರಣಾ ಕಾಲುವೆ ದಂಡೆಯ ಮೇಲೆ ನೂರಾರು ಗುಡಿಸಲು, ಶೆಡ್‌ಗಳಲ್ಲಿ ನಿವಾಸಿಗಳು ವಾಸಿಸುತ್ತಿದ್ದಾರೆ. ಹೀಗಾಗಿ ಎಲ್ಲೆಂದರಲ್ಲಿ ಬಯಲು ಬಹಿರ್ದೆಸೆಗೆ ಹೋಗಬಾರದು ಎನ್ನುವ ಕಾರಣಕ್ಕೆ ಪುರಸಭೆ ಕಾಲುವೆಗೆ ಹೊಂದಿಕೊಂಡಂತೆ ಹೈಟೆಕ್ ಶೌಚಗೃಹ ನಿರ್ಮಾಣಕ್ಕೆ ಮುಂದಾಗಿದೆ.

ಹಿಂದಿನ ಮುಖ್ಯಾಧಿಕಾರಿ ಸುರೇಶ ಶೆಟ್ಟರ್ 15ನೇ ಹಣಕಾಸು ಅಡಿ ಅಂದಾಜು 15.20 ಲಕ್ಷ ರೂ.ವೆಚ್ಚದಲ್ಲಿ ಹೈಟೆಕ್ ಶೌಚಗೃಹ ನಿರ್ಮಾಣಕ್ಕೆ ಗುದ್ದಲಿ ಪೂಜೆ ನಡೆಸಿದ್ದರು. ಆದರೆ, ಪಕ್ಕದ ನಿವೇಶನದ ಮಾಲೀಕರೊಬ್ಬರು ದೂರು ನೀಡಿದ ಕಾರಣಕ್ಕೆ ಎಂಟು ತಿಂಗಳಿಂದ ಕಾಮಗಾರಿ ಅರ್ಧಕ್ಕೆ ನಿಂತಿದೆ. ಈ ಸಂಬಂಧ ಸಮಸ್ಯೆ ಬಗೆಹರಿಸುವಂತೆ ಅನೇಕ ಬಾರಿ ತಿಳಿಸಿದರೂ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಹೈಟೆಕ್ ಶೌಚಗೃಹ ಜಾಗ ನೀರಾವರಿ ಇಲಾಖೆಗೆ ಸಂಬಂಧಿಸಿದ್ದು, ಹೀಗಾಗಿ ಸಮಸ್ಯೆಯಾಗುತ್ತಿದೆ. ಮೊದಲು ನೀರಾವರಿ ಇಲಾಖೆ ಪುರಸಭೆಗೆ ಸ್ಥಳ ಹಸ್ತಾಂತರ ಮಾಡಿದರೆ ಅನುಕೂಲವಾಗಲಿದೆ ಎನ್ನುವುದು ಸ್ಥಳೀಯರ ಮಾತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net