

ಕಾರಟಗಿ: ಗ್ರಾಮೀಣ ಭಾಗದಲ್ಲಿ ಸ್ವಚ್ಛ ಹಾಗೂ ಹಸಿರು ವಿದ್ಯುತ್ ಉತ್ಪಾದನೆಗೆ ಉತ್ತೇಜನ ನೀಡಲು ಸರ್ಕಾರ ಮುಂದಾಗಿದೆ. ಹೀಗಾಗಿ ಜೆಸ್ಕಾಂ ‘ಮಾದರಿ ಸೋಲಾರ್ ಗ್ರಾಮ ಯೋಜನೆ’ ಅನುಷ್ಠಾನ ಕುರಿತು ಗ್ರಾಮೀಣ ಪ್ರದೇಶದಲ್ಲಿ ಪ್ರಚಾರ ಕಾರ್ಯ ಆರಂಭಿಸಿದೆ.
ಜಿಲ್ಲೆಯಲ್ಲಿನ ಐದು ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಗ್ರಾಮಗಳಲ್ಲಿ ನವೀಕರಿಸಹುದಾದ ಮೂಲಗಳಿಂದ ವಿದ್ಯುತ್ ಉತ್ಪಾದನೆ ಹೆಚ್ಚಿಸುವುದು ಇದರ ಮುಖ್ಯ ಉದ್ದೇಶವಾಗಿದೆ.
2025 ಮಾ.20 ರಿಂದ 2025 ಸೆ.20ರ ಅಂತ್ಯಕ್ಕೆ ಅತಿ ಹೆಚ್ಚು ನವೀಕರಿಸಬಹುದಾದ ಮೂಲಗಳಿಂದ ವಿದ್ಯುತ್ ಉತ್ಪಾದಿಸುವ ಗ್ರಾಮವನ್ನು ‘ಮಾದರಿ ಸೋಲಾರ್ ಗ್ರಾಮವೆಂದು’ ಘೋಷಿಸುವ ಬಗ್ಗೆ ಚಿಂತನೆ ನಡೆದಿದ್ದು, ಈಗಾಗಲೇ ಜಿಲ್ಲಾಧಿಕಾರಿ ನಲಿನ್ ಅತುಲ್ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ, ನಡಾವಳಿಗಳನ್ನು ಸಿದ್ಧಪಡಿಸಲಾಗಿದೆ.
ಐದು ಸಾವಿರಕ್ಕೂ ಹೆಚ್ಚಿನ ಜನಸಂಖ್ಯೆಯುಳ್ಳ ಗ್ರಾಮಸ್ಥರಿಗೆ ಹಾಗೂ ಸಂಘ ಸಂಸ್ಥೆಗಳಿಗೆ ಸೋಲಾರ್ ಯೋಜನೆಗಳಾದ ಪ್ರಧಾನ ಮಂತ್ರಿ ಸೂರ್ಯ ಘರ್ ಮುಪ್ತ್ ಬಿಜಲಿ ಯೋಜನೆ, ಪಿಎಂ ಕುಸುಮ್-ಬಿ ಯೋಜನೆ ಮತ್ತು ನವೀಕರಿಸಬಹುದಾದ ವಿದ್ಯುತ್ ಉತ್ಪಾದನೆಗೆ ಲಭ್ಯವಿರುವ ಯೋಜನೆಗಳ ಮಾಹಿತಿ ನೀಡಿ, ಸದರಿ ಯೋಜನೆಗಳ ಉಪಯೋಗ ಪಡೆದುಕೊಳ್ಳಲು ಸಿಬ್ಬಂದಿ ಜಾಗೃತಿ ಮೂಡಿಸುವಂತೆ ಡಿಸಿ ಸೂಚಿಸಿದ್ದಾರೆ.
ಗ್ರಾಮಗಳು ಸ್ವಾವಲಂಬಿಯಾಗಿ ವಿದ್ಯುತ್ ಉತ್ಪಾದಿಸುವುದು, ವಿದ್ಯುತ್ ಕಂಪನಿಗಳ ಮೇಲಿನ ಅವಲಂಬನೆ ತಪ್ಪಿಸುವುದು, ಮಾದರಿ ಸೋಲಾರ್ ಗ್ರಾಮದಲ್ಲಿನ ಎಲ್ಲ ಮನೆಗಳಿಗೆ ಹಾಗೂ ಸಾರ್ವಜನಿಕ ಪ್ರದೇಶಗಳಿಗೆ ಸೋಲಾರ್ ವಿದ್ಯುತ್ ಉತ್ಪಾದನೆ ಮೂಲಕ ವಿದ್ಯುತ್ ಪೂರೈಸುವುದು.
ಕೃಷಿ ಪಂಪ್‌ಸೆಟ್‌ಗಳಿಗೆ ಸೋಲಾರ್ ಪಂಪ್‌ಗಳ ಅಳವಡಿಕೆ, ಸೋಲಾರ್ ಬೀದಿದೀಪ ಬಳಸಲು ಉತ್ತೇಜಿಸುವುದು ಈ ಯೋಜನೆಯ ಉದ್ದೇಶಗಳಾಗಿವೆ. ಈ ಯೋಜನೆ ಅನುಷ್ಠಾನಕ್ಕೆ 6 ತಿಂಗಳ ಕಾಲ ಚಾಲೆಂಜ್ ಪಿರೀಡ್ ಎಂದು ಡಿಸಿ ಘೋಷಿಸಿದ್ದು, ಕಾರ್ಯ ಕೈಗಳಲ್ಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
27 ಗ್ರಾಮಗಳ ಗುರುತು: ಮಾದರಿ ಸೋಲಾರ್ ಗ್ರಾಮ ಅನುಷ್ಠಾನ ಸಂಬಂಧ ಈಗಾಗಲೇ ಜಿಲ್ಲೆಯ ಪ್ರತಿ ತಾಲೂಕಿನ ಒಟ್ಟು 27 ಗ್ರಾಮಗಳನ್ನು ಗುರುತಿಸಲಾಗಿದೆ. ಪ್ರತಿ ಗ್ರಾಮವು ಸಹ 5 ಸಾವಿರ ಜನಸಂಖ್ಯೆಗಿಂತ ಹೆಚ್ಚಿನ ಜನರನ್ನು ಹೊಂದಿವೆ. ಪ್ರತಿ ಗ್ರಾಮಗಳು ಮಾದರಿ ಸೋಲಾರ್ ಗ್ರಾಮ ಯೋಜನೆ ಸದ್ಬಳಕೆ ಮಾಡಿಕೊಂಡರೆ ಸ್ವಾವಲಂಬಿ ವಿದ್ಯುತ್ ಉತ್ಪಾದನೆ ಹೆಚ್ಚಾಗಲಿದೆ. ಈಗಾಗಲೇ ಕಾರಟಗಿ ತಾಲೂಕಿನ ಸಿದ್ದಾಪುರ, ಮರ್ಲಾನಹಳ್ಳಿ, ಬೂದಗುಂಪಾದಲ್ಲಿ ಈ ಯೋಜನೆ ಕುರಿತು ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ.
ಆಯ್ಕೆಯಾದ ಜಿಲ್ಲೆಯ ಊರುಗಳು: ‘ಮಾದರಿ ಸೋಲಾರ್ ಗ್ರಾಮ ಯೋಜನೆ’ಯನ್ನು ಜಿಲ್ಲೆಯ ಕುಷ್ಟಗಿ ತಾಲೂಕಿನ ಹೂಲಗೇರಾ, ಹಿರೇಮನ್ನಾಪೂರ, ಗಂಗಾವತಿ ತಾಲೂಕಿನ ಬಸಾಪಟ್ಟಣ, ಹೇರೂರು, ಹಣವಾಳ, ಹೊಸ್ಕೇರಾ, ಮರಳಿ, ಶ್ರೀರಾಮನಗರ, ಕನಕಗಿರಿ ತಾಲೂಕಿನಲ್ಲಿ ನವಲಿ, ಕಾರಟಗಿಯ ಮರ್ಲಾನಹಳ್ಳಿ, ಯರಡೋಣ, ಬೂದಗುಂಪಾ, ಸಿದ್ದಾಪುರ, ಗುಂಡೂರು, ಮುಸ್ಟೂರು, ಕೊಪ್ಪಳ ತಾಲೂಕಿನ ಕವಲೂರು, ಅಳವಂಡಿ, ಗಿಣಗೇರಾ, ಕಿನ್ನಾಳ, ಇಂದರಗಿ, ಬಂಡಿ ಹರ್ಲಾಪೂರ, ಹಿಟ್ನಾಳ, ಹೊಸಹಳ್ಳಿ ಹಾಗೂ ಯಲಬುರ್ಗಾ ತಾಲೂಕಿನ ಮುಧೋಳ, ಬೇವೂರು, ಕುಕನೂರಿನ ಮಂಗಳೂರು, ತಳಕಲ್ ಗ್ರಾಮಗಳನ್ನು ಯೋಜನೆಯನ್ನು ಪ್ರಚಾರ ಪಡಿಸಲು ಆಯ್ಕೆ ಮಾಡಲಾಗಿದೆ.
ಕೋಟ್: ಮಾದರಿ ಸೋಲಾರ್ ಗ್ರಾಮ ಯೋಜನೆ ಅನುಷ್ಠಾನಕ್ಕೆ ಯೋಜನೆ ರೂಪಿಸಲಾಗಿದೆ. ಈಗಾಗಲೇ ಕಾರಟಗಿ ತಾಲೂಕಿನ ಮರ್ಲಾನಹಳ್ಳಿ, ಯರಡೋಣ ಹಾಗೂ ಬೂದಗುಂಪಾದಲ್ಲಿ ಯೋಜನೆ ಕುರಿತು ಪ್ರಚಾರ ಮಾಡಲಾಗಿದ್ದು, ಬಾಕಿ ಕಡೆಗಳಲ್ಲೂ ಮುಂದುವರಿಯಲಿದೆ. ಜನರು ಯೋಜನೆಯನ್ನು ಸದ್ಬಳಕೆ ಮಾಡಿಕೊಂಡು ಸ್ವಾವಲಂಬಿಯಾಗಿ ವಿದ್ಯುತ್ ಉತ್ಪಾದನೆಯತ್ತ ಚಿತ್ತ ಹರಿಸಬೇಕು.
ಎಂ.ವೀರೇಶ್, ಜೆಸ್ಕಾಂ ಎಇಇ, ಕಾರಟಗಿ