

ಕಾರಟಗಿ: ಕಾರಟಗಿ ಹಾಗೂ ಗಂಗಾವತಿ ತಾಪಂಗಳ ಮನರೇಗಾ ಆಡಳಿತಾತ್ಮಕ ವೆಚ್ಚಗಳಲ್ಲಿ ಅವ್ಯವಹಾರ ಆರೋಪ ಕೇಳಿ ಬಂದಿದ್ದು, ಈ ಸಂಬಂಧ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಕೊಪ್ಪಳ ಜಿಪಂಗೆ ಗ್ರಾಮೀಣಾಭಿವೃದ್ಧಿ ಆಯುಕ್ತಾಲಯದ ಮುಖ್ಯ ಕಾರ್ಯಾಚರಣೆ ಅಧಿಕಾರಿ ಪತ್ರ ಬರೆದಿರುವುದು ಬಹಿರಂಗಗೊಂಡಿದೆ.
ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಗಳ ಅನುಷ್ಠಾನದಲ್ಲಿ ಗ್ರಾಪಂ ಹಂತದಲ್ಲಿ ನಿರ್ವಹಣೆ ವೆಚ್ಚಗಳನ್ನು ಭರಿಸಲು ಅವಕಾಶವಿರುತ್ತದೆ. ಆಡಳಿತಾತ್ಮಕ ಪ್ರಸ್ತಾವನೆಗಳನ್ನು ತಾಪಂ ಇಒ ಲಕ್ಷ್ಮೀದೇವಿ ಗ್ರಾಪಂಗಳಿಂದ ಸ್ವೀಕೃತಗೊಂಡ ಪ್ರಸ್ತಾವನೆಗಳ ಪ್ರಕಾರ ಗಂಗಾವತಿ ತಾಲೂಕಿನ 18 ಗ್ರಾಪಂಗಳಿಗೆ ರೂ.16.78 ಲಕ್ಷ ರೂ. ಬಿಡುಗಡೆ ಕೋರಿ ಕೊಪ್ಪಳ ಜಿಪಂ ಸಿಇಒಗೆ ಪ್ರಸ್ತಾವನೆ ಸಲ್ಲಿಸಿದ್ದು, ಆಯುಕ್ತಾಲಯ 2024ರ ಮೇ.31ರಂದು 16.78 ಲಕ್ಷ ರೂ. ಬಿಡುಗಡೆ ಮಾಡಿತ್ತು. ಈ ಅನುದಾನವನ್ನು ತಾಪಂ ಇಒ ಲಕ್ಷ್ಮೀದೇವಿ ಬಳಸಿಕೊಂಡಿದ್ದಾರೆ ಎಂಬ ಆರೋಪದಡಿ ಆಯುಕ್ತಾಲಯಕ್ಕೆ ದೂರು ಸಲ್ಲಿಕೆಯಾಗಿತ್ತು. ಗಂಗಾವತಿ ಹಾಗೂ ಕಾರಟಗಿ ತಾಪಂ ಮನರೇಗಾ ಆಡಳಿತಾತ್ಮಕ ವೆಚ್ಚಗಳ ಅವ್ಯವಹಾರ ಕುರಿತು ಸಮಗ್ರ ತನಿಖೆ ನಡೆಸುವಂತೆ ದೂರಿನಲ್ಲಿ ಕೋರಿದ್ದಾರೆ. ಹೀಗಾಗಿ ಗ್ರಾಮೀಣಾಭಿವೃದ್ಧಿ ಆಯುಕ್ತಾಲಯದ ಮುಖ್ಯ ಕಾರ್ಯಾಚರಣೆ ಅಧಿಕಾರಿ ಕೊಪ್ಪಳ ಜಿಪಂಗೆ ಪತ್ರ ಬರೆದಿದ್ದು, ಮನರೇಗಾ ಮಾರ್ಗಸೂಚಿಗಳಡಿ ನಿಯಮಾನುಸಾರ ಪರಿಶೀಲಿಸಿ ಆಯುಕ್ತಾಲಯಕ್ಕೆ ವರದಿ ಸಲ್ಲಿಸುವಂತೆ ಕೋರಲಾಗಿದೆ.
ಕಾರಟಗಿ ಹಾಗೂ ಗಂಗಾವತಿ ತಾಪಂಗಳ ಮನರೇಗಾ ಆಡಳಿತಾತ್ಮಕ ವೆಚ್ಚಗಳಲ್ಲಿ ಅವ್ಯವಹಾರ ಕುರಿತು ನನಗೆ ಈವರೆಗೆ ಜಿಪಂನಿಂದ ಯಾವುದೇ ನೋಟಿಸ್ ಬಂದಿಲ್ಲ. ಬಂದರೆ ನಾನು ಉತ್ತರ ಕೊಡುತ್ತೇನೆ.
ಲಕ್ಷ್ಮೀದೇವಿ, ತಾಪಂ ಇಒ, ಕಾರಟಗಿ