ಕಾರಟಗಿಯಲ್ಲಿ 332 ಜನರಿಗೆ ಕಣ್ಣಿನ ಉಚಿತ ಶಸ್ತ್ರಚಿಕಿತ್ಸೆ ಯಶಸ್ವಿ: 28 ತಜ್ಞ ವೈದ್ಯರ ಅವಿರತಶ್ರಮ

10092022 Karatagi free EYE camp
Published on

ಕಾರಟಗಿ: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸೆ.9 ಮತ್ತು 10ರಂದು ಏರ್ಪಡಿಸಿದ್ದ ಕಣ್ಣಿನ ಉಚಿತ ಶಸ್ತ್ರಚಿಕಿತ್ಸೆ ಶಿಬಿರ ಯಶಸ್ವಿಯಾಗಿ ಪೂರ್ಣಗೊಂಡಿತು.

ಮೊದಲ ದಿನ 182 ಹಾಗೂ ಎರಡನೇ ದಿನ 150 ಜನ ಸೇರಿ ಒಟ್ಟು 332 ಜನರಿಗೆ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಲಾಯಿತು. ಬೆಂಗಳೂರಿನ ಶ್ರೀಸ್ವಾಮಿವಿವೇಕಾನಂದ ಸೇವಾಶ್ರಮದ ಆಸ್ಪತ್ರೆಯ ತಜ್ಞ ವೈದ್ಯರಾದ ಚೇತನ್, ಸದಾನಂದ, ಜಯಂತಿ, ಪುನೀತ್, ಮಧುರಾ, ಡಾ.ಮಂಜುನಾಥ ನೇತೃತ್ವದ 28 ಜನರ ತಂಡ ಯಶಸ್ವಿ ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸಿತು. ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಶಕುಂತಲಾ ಪಾಟೀಲ್, ವೈದ್ಯರಾದ ವೀರಭದ್ರಗೌಡ, ನಾಗರಾಜ ಕುಂಬಾರ, ನೌಷಾದ್ ಹಾಗೂ ಪ್ರಿಯಾಂಕ ನೇತೃತ್ವದ ಸಿಬ್ಬಂದಿ, ರೋಗಿಗಳ ಆರೈಕೆ ಮಾಡಿತು. ವಿವೇಕಾನಂದ ಸೇವಾಶ್ರಮದ ಮುಖ್ಯಸ್ಥ ವೆಂಕಟೇಶಮೂರ್ತಿ ಹಾಗೂ ಶಾಮಣ್ಣ, ಅಭಿಲಾಷ್ ಮೇಲ್ವಿಚಾರಣೆ ನೋಡಿಕೊಂಡರು.

ಕಾರಟಗಿ, ಕನಕಗಿರಿ, ಗಂಗಾವತಿ ಹಾಗೂ ನೆರೆಯ ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ವಿವಿಧ ಗ್ರಾಮಗಳ ಜನರು ಕಣ್ಣಿನ ಶಸ್ತ್ರಚಿಕಿತ್ಸೆಗೆ ಒಳಗಾದರು. ಅವರಿಗೆ ಉಚಿತ ಕನ್ನಡಕ, ಉಳಿದುಕೊಳ್ಳಲು ಮತ್ತು ಉಟೋಪಚಾರ ವ್ಯವಸ್ಥೆ ಮಾಡಲಾಗಿತ್ತು. ಶ್ರೀವಿವೇಕಾನಂದ ಸೇವಾಶ್ರಮ, ಪುರಸಭೆ ಸದಸ್ಯೆ ಸೌಮ್ಯಾ ಮಹೇಶ ಕಂದಗಲ್, ಮಾಜಿ ಸದಸ್ಯೆ ಸ್ವಾತಿ ಅಮರೇಶ ಪಾಟೀಲ್, ಮರೇಗೌಡ ಮಾಲಿಪಾಟೀಲ್ ಹಾಗೂ ಶರಣಪ್ಪ ಕಲಕೇರಿ ಗೆಳೆಯರ ಬಳಗದ ಕಾರ್ಯಕ್ಕೆ ಶಸ್ತ್ರಚಿಕಿತ್ಸೆಗೊಳಗಾದವರು ಹಾಗೂ ಸಾರ್ವಜನಿಕರು ಶ್ಲಾಘನೆ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net