

ಕಾರಟಗಿ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಅಂಧತ್ವ ನಿಯಂತ್ರಣ ವಿಭಾಗ, ಸ್ವಾಮಿ ವಿವೇಕಾನಂದ ಸೇವಾಶ್ರಮ ಬೆಂಗಳೂರು, ಕಾರಟಗಿಯ ಆಸರೆ ಚಾರಿಟಬಲ್ ಟ್ರಸ್ಟ್, ಸಹನಾ ಫೌಂಡೇಷನ್ ಹಾಗೂ ತಾಲೂಕು ಸಮುದಾಯ ಆರೋಗ್ಯ ಕೇಂದ್ರದಿಂದ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಎರಡು ದಿನಗಳ ನೇತ್ರ ಶಸ್ತ್ರ ಚಿಕಿತ್ಸಾ ಉಚಿತ ಶಿಬಿರಕ್ಕೆ ಅಗ್ನಿಕೊಂಡ ದ್ಯಾವಮ್ಮ ದೇವಿ ಆರಾಧಕ ಭೀಮೇಶಪ್ಪ ಅಪ್ಪಾಜಿ ಶುಕ್ರವಾರ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಗ್ರಾಮೀಣ ಜನರಲ್ಲಿ ಕಣ್ಣಿನ ಪೊರೆ ಸೇರಿದಂತೆ ನಾನಾ ಸಮಸ್ಯೆಗಳು ಅಧಿಕವಾಗಿ ಕಾಣಿಸಿಕೊಳ್ಳುತ್ತಿವೆ. ಆದರೆ ಸೂಕ್ತ ವೈದ್ಯರ ಬಳಿ ತೋರಿಸಿಕೊಳ್ಳದೆ ದೃಷ್ಟಿದೋಷ ಹೆಚ್ಚುಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಕಾರಣ ಬಡತನವೂ ಇದೆ. ಇಂತಹ ಸಾವಿರಾರು ಜನರಿಗೆ ಉಚಿತವಾಗಿ ತಪಾಸಣೆ ನಡೆಸಿ ಅಗತ್ಯವಿದ್ದವರಿಗೆ ಕನ್ನಡಕ, ಶಸ್ತ್ರಚಿಕಿತ್ಸೆ ಹಾಗೂ ಔಷಧ ನೀಡುವುದು ಬಹುದೊಡ್ಡ ಕೊಡುಗೆ. ಸಮಾಜಕ್ಕೆ ಇಂಥ ಕಾರ್ಯಗಳು ಅವಶ್ಯ ಎಂದರು.
ಬೆಂಗಳೂರಿನ ಸ್ವಾಮಿ ವಿವೇಕಾನಂದ ಸೇವಾಶ್ರಮದ ಡಾ. ಚೇತನಕುಮಾರ್, ಡಾ. ಜಯಂತಿ ನೇತೃತ್ವದ ವೈದ್ಯರ ತಂಡ ಶಿಬಿರದ ಮೊದಲನೇ ದಿನ 170 ಜನರ ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡಿತು.
ಆಸರೆ ಟ್ರಸ್ಟ್ ಅಧ್ಯಕ್ಷ ಚನ್ನಬಸಪ್ಪ ಸುಂಕದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಟಿಎಚ್‌ಒ ಶರಣಪ್ಪ ಚಕೋತಿ, ಟ್ರಸ್ಟ್ ಗೌರವಾಧ್ಯಕ್ಷ ಶರಣಯ್ಯಸ್ವಾಮಿ ಸಾಹುಕಾರ ಯರಡೋಣಾ, ಯುವ ಮುಖಂಡ ಶಶಾಂಕ್ ತಂಗಡಗಿ, ವಿವೇಕಾನಂದ ಟ್ರಸ್ಟ್‌ನ ಮ್ಯಾನೇಜಿಂಗ್ ಡೈರಕ್ಟರ್ ಗೋಪಾಲಕೃಷ್ಣ, ಯುವ ಮುಖಂಡ ನಾಗರಾಜ್ ಅರಳಿ, ನಿವೃತ್ತ ದೈಹಿಕ ಶಿಕ್ಷಕ ಅಲಿ ಹುಸೇನ್, ವಿರುಪಣ್ಣ ಮೂಲಿಮನಿ, ಪುರಸಭೆ ಸದಸ್ಯ ಹಿರೇಬಸಪ್ಪ ಸಜ್ಜನ್ ಇದ್ದರು.