

ಕಾರಟಗಿ: ಬೇವಿನಾಳದಲ್ಲಿ ದಾಸಶ್ರೇಷ್ಠ ಕನಕದಾಸ ಮೂರ್ತಿ ವಿರೂಪಗೊಳಿಸಿದವರನ್ನು ಪೊಲೀಸ್ ಇಲಾಖೆ ಪತ್ತೆಹಚ್ಚಿ, ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ದಢೇಸುಗೂರು ಆಗ್ರಹಿಸಿದರು.
ತಾಲೂಕಿನ ಬೇವಿನಾಳ ಗ್ರಾಮದಲ್ಲಿ ಕನಕದಾಸ ಮೂರ್ತಿಯನ್ನು ಕಿಡಿಗೇಡಿಗಳು ವಿರೂಪಗೊಳಿಸಿದ ಸ್ಥಳಕ್ಕೆ ಶುಕ್ರವಾರ ಭೇಟಿ ನೀಡಿ ಮಾತನಾಡಿದರು. ತಾಲೂಕಿನಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ. ಭಯವಿದ್ದಿದ್ದರೆ ಗ್ರಾಮೀಣ ಪ್ರದೇಶದಲ್ಲಿ ಇಂಥ ಘಟನೆಗಳು ನಡೆಯುತ್ತಿರಲಿಲ್ಲ. ಕನಕದಾಸರು ಕೇವಲ ಒಂದು ಸಮುದಾಯಕ್ಕೆ ಮಾತ್ರ ಸೀಮಿತವಾಗಿಲ್ಲ. ಎಲ್ಲ ವರ್ಗದವರಿಗೂ ಅವರ ಬಗ್ಗೆ ಗೌರವವಿದೆ. ಘಟನೆಯನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಬೇಕು. ಆದಷ್ಟು ಬೇಗ ಕಿಡಿಗೇಡಿಗಳ ಬಂಧನ ಮಾಡಬೇಕು. ಮುಂದಿನ ದಿನಗಳಲ್ಲಿ ಇಂಥ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕು ಎಂದು ಆಗ್ರಹಿಸಿದರು.
ಮುಖಂಡರಾದ ಉಮೇಶ್ ಬಂಗಿ, ಹನುಮಂತಪ್ಪ ಕಬ್ಬೇರ್, ಸಿದ್ದು, ವಿಕ್ರಂ ಮೇಟಿ ಇತರರಿದ್ದರು.