

ಕಾರಟಗಿ: ‘ಬಿಜೆಪಿ ಕನಕಗಿರಿ ಕ್ಷೇತ್ರ’ ಎನ್ನುವ ವಾಟ್ಸ್‌ಆಪ್ ಗ್ರೂಪ್‌ನಲ್ಲಿ ಪಕ್ಷದ ಕಾರ್ಯಕರ್ತರ ಅಸಮಾಧಾನ ಮುಂದುವರಿದಿದ್ದು, ಈಗ ಕಾಂಗ್ರೆಸ್ ನಾಯಕರ ಕೆಸಲದ ಕುರಿತು ಜಪ ಮಾಡುತ್ತಿದ್ದಾರೆ.
ಶಾಸಕ ಬಸವರಾಜ ದಢೇಸುಗೂರು ಕಡೆಗಣಿಸುತ್ತಿದ್ದಾರೆನ್ನುವ ಬಗ್ಗೆ ಬಿಜೆಪಿ ಕಾರ್ಯಕರ್ತರು ಪದೇಪದೆ ೆಅಸಮಧಾನ ಹೊರಹಾಕುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜನ್ಮದಿನದ ಅಮೃತ ಮಹೋತ್ಸವದ ಕಾರ್ಯಕ್ರಮ ಶಾಸಕ ದಢೇಸುಗೂರು ವಿರುದ್ಧ ಮತ್ತೊಮ್ಮೆ ಅವರದೇ ಪಕ್ಷದ ಮುಖಂಡರ ಬೇಸರಕ್ಕೆ ಕಾರಣವಾಗಿದೆ. ದಾವಣಗೆರೆಯಲ್ಲಿ ನಡೆದ ಕಾರ್ಯಕ್ರಮಕ್ಕೆ ಕಾಂಗ್ರೆಸ್ ನಾಯಕರು ಕ್ಷೇತ್ರದ ಪ್ರತಿ ಹಳ್ಳಿಯಿಂದ ಕಾರ್ಯಕರ್ತರನ್ನು ಕರೆದೊಯ್ದಿದ್ದಾರೆ. ಆದರೆ, ಕ್ಷೇತ್ರದಲ್ಲಿ ಬಿಜೆಪಿಯಿಂದ ನಡೆಯುವ ಯಾವುದೇ ಕಾರ್ಯಕ್ರಮಕ್ಕೆ ಕಾರ್ಯಕರ್ತರನ್ನು ಕರೆಯುವುದಿಲ್ಲ. ಮುಂದೆ ಚುನಾವಣೆ ಅದ್ಹೇಗೆ ಎದುರಿಸುತ್ತಾರೆ. ನಾಚಿಕೆ ಆಗಬೇಕು ನಮಗೆ. ಪಕ್ಷದಿಂದ ಲಾಭಪಡೆದು ಪಕ್ಷದ ವಿರುದ್ಧ ಮಾತನಾಡುವವರಿಗೆ ಮಣೆ ಹಾಕುವ ಬದಲು ನಿಷ್ಠಾವಂತ ಕಾರ್ಯಕರ್ತರ ಬಗ್ಗೆ ನಾಯಕರು ಚಿಂತಿಸಬೇಕಿದೆ ಎನ್ನುವ ಅಸಮಾಧಾನದ ಪೋಸ್ಟ್‌ಗಳನ್ನು ಮೇಲಿಂದ ಮೇಲೆ ಹಾಕುತ್ತಲಿದ್ದಾರೆ.
ದಾವಣಗೆರೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಜನ್ಮದಿನದ ಅಮೃತ ಮಹೋತ್ಸವಕ್ಕೆ ಕನಕಗಿರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ನಿಂದ 50ಕ್ಕೂ ಹೆಚ್ಚು ಸಾರಿಗೆ ಬಸ್, 5 ಮಿನಿ ಬಸ್ ಹಾಗೂ 20 ಕ್ರಷರ್ ಸೇರಿದಂತೆ ಅನೇಕ ವೈಯಕ್ತಿಕ ಕಾರ್‌ಗಳಲ್ಲಿ ಸಾವಿರಾರು ಸಂಖ್ಯೆಯ ಕಾರ್ಯಕರ್ತರು ತೆರಳಿದ್ದಾರೆ. ಪ್ರತಿ ಹಳ್ಳಿಯಿಂದ ಕಾರ್ಯಕರ್ತರನ್ನು ಕರೆದೊಯ್ದಿರುವುದು ವಿಶೇಷ. ಇತ್ತೀಚೆಗೆ ಬಿಜೆಪಿಯಿಂದ ನಡೆಯುವ ಕಾರ್ಯಕ್ರಮಗಳಿಗೆ ಕಾರ್ಯಕರ್ತರನ್ನು ಆಹ್ವಾನಿಸುವುದಿಲ್ಲ ಎನ್ನುವುದು ಅಸಮಾಧಾನಕ್ಕೆ ಕಾರಣವಾಗಿದೆ.