

ಕಾರಟಗಿ: ನಾನು ಪಕ್ಷದ ಶಿಸ್ತಿನ ಸಿಪಾಯಿ, ಬಿಜೆಪಿ ಹೈ ಕಮಾಂಡ್ ರಾಜ್ಯಸಭಾ ಸ್ಥಾನಕ್ಕೆ ನನಗೆ ಟಿಕೆಟ್ ಘೋಷಿಸುವ ಮೂಲಕ ಸಲ್ಲಿಸಿರುವ ಗೌರವ ಪ್ರತಿಯೊಬ್ಬ ಕಾರ್ಯಕರ್ತರಿಗೆ ಸಲ್ಲಬೇಕಾದುದು ಎಂದು ರಾಜ್ಯಸಭಾ ಅಭ್ಯರ್ಥಿ ರಾಯಚೂರಿನ ಅಶೋಕ ಗಸ್ತಿ ಹೇಳಿದರು.
ಪಟ್ಟಣದ ಖಾಸಗಿ ಕಲ್ಯಾಣ ಮಂಟಪದಲ್ಲಿ ಬಿಜೆಪಿಯಿಂದ ಹಮ್ಮಿಕೊಂಡಿದ್ದ ಬಳ್ಳಾರಿ, ಕೊಪ್ಪಳ, ರಾಯಚೂರು ಜಿಲ್ಲೆಗಳ ವಿಭಾಗದ ಸಂಘಟನಾತ್ಮಕ ಬೈಠಕ್ನಲ್ಲಿ ಸೋಮವಾರ ಭಾಗವಹಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.
30 ವರ್ಷಗಳಿಂದ ಪಕ್ಷದ ಪ್ರಮಾಣಿಕ ಕಾರ್ಯಕರ್ತನಾಗಿ ಬೂತ್ ಮಟ್ಟದಿಂದ ಪಕ್ಷ ಸಂಘಟಿಸುವ ಜತೆಗೆ ಪಕ್ಷ ಹೇಳಿದ ಪ್ರತಿಯೊಂದು ಕೆಲಸವನ್ನು ಮಾಡಿದ್ದೇನೆ. 3 ದಶಕಗಳ ಕಾಲ ನಾನು ಪಕ್ಷವನ್ನು ಏನನ್ನು ಕೇಳಿಲ್ಲ. ಯಾವುದೇ ಪದವಿಗೆ ಬೇಡಿಕೆ ಇಟ್ಟಿಲ್ಲ. ಹೈ ಕಮಾಂಡ್ ನನ್ನ ಶ್ರಮವನ್ನು ಗುರುತಿಸಿದ್ದಕ್ಕೆ ತುಂಬಾ ಸಂತೋಷವಾಗಿದೆ. ಪಕ್ಷ ಬಿಟ್ಟರೆ ನನಗೆ ಮತ್ತೆನೂ ಗೊತ್ತಿಲ್ಲ ಎಂದರು.
ಸಭೆಯ ಮಧ್ಯದಲ್ಲಿಯೇ ಸಂದೇಶ: ಮೂರು ಜಿಲ್ಲೆಗಳ ಬಿಜೆಪಿ ಪ್ರಮುಖರ ಬೈಠಕ್ ಸಭೆಯ ಮಧ್ಯದಲ್ಲಿಯೇ ಹೈ ಕಮಾಂಡ್ ಅಶೋಕ್ ಗಸ್ತಿಗೆ ರಾಜ್ಯಸಭಾ ಟಿಕೆಟ್ ಘೋಷಣೆ ಮಾಡಿರುವ ವಿಚಾರ ತಿಳಿಯಿತು. ಬಿಜೆಪಿಯ ಈ ನಿರ್ಧಾರ ಸಭೆಯಲಿದ್ದ ಎಲ್ಲರನ್ನು ಕ್ಷಣಕಾಲ ಚಕಿತಗೊಳಿಸಿತು. ಹೈ ಕಮಾಂಡ್ ನಿಂದ ಸಂದೇಶ ಬಂದ ಕ್ಷಣವೇ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸಭೆಯಲ್ಲಿ ವಿಷಯ ಪ್ರಕಟಿಸಿ, ಅಶೋಕ್ ಗಸ್ತಿಯವರಿಗೆ ಶುಭಕೋರಿ ಸಿಹಿ ತಿನಿಸಿದರು. ಸಚಿವ ಆನಂದ ಸಿಂಗ್, ಶಾಸಕರಾದ ಹಾಲಪ್ಪ ಆಚಾರ್, ಜಿ.ಸೋಮಶೇಖರ ರೆಡ್ಡಿ, ಸೋಮಲಿಂಗಪ್ಪ, ಬಳ್ಳಾರಿ ಸಂಸದ ದೇವೇಂದ್ರಪ್ಪ, ಕೊಪ್ಪಳ ಜಿಲ್ಲಾಧ್ಯಕ್ಷ ದೊಡ್ಡನಗೌಡ ಪಾಟೀಲ್ ಇತರರು ಇದ್ದರು.