ನೀಲಮ್ಮ ಕುಟುಂಬಕ್ಕಿಲ್ಲ ಭದ್ರತೆ, ಕಚೇರಿಗಳಿಗೆ ಅಲೆದು ಸುಸ್ತಾದ ಪರಿವಾರ

a victim who lost her home
ಕಾರಟಗಿ ತಾಲೂಕಿನ ತಿಮ್ಮಾಪೂರ ಗ್ರಾಮದಲ್ಲಿ ತೆರವು ಕಾರ್ಯಾಚರಣೆಯಲ್ಲಿ ಮನೆ ಕಳೆದುಕೊಂಡು ಅತಂತ್ರಗೊಂಡ ನೀಲಮ್ಮ ಹೋಟೆಲ್ ಮತ್ತು ಮಕ್ಕಳು.
Published on

ಕಾರಟಗಿ: ತಾಲೂಕಿನ ತಿಮ್ಮಾಪೂರ ಗ್ರಾಮದ ಸ.ಹಿ.ಪ್ರಾ. ಶಾಲೆ ಬಳಿ ಆ.22ರಂದು ನಡೆದ ತೆರವು ಕಾರ್ಯಾಚರಣೆಯಲ್ಲಿ ಮನೆ ಕಳೆದುಕೊಂಡು ಅತಂತ್ರಗೊಂಡ ನೀಲಮ್ಮಳ ಕುಟುಂಬ ಅಭದ್ರತೆಯಲ್ಲೇ ದಿನದೂಡುತ್ತಿದೆ.

ಕಳೆದ ಏಳು ದಿನಗಳಿಂದ ಪರರ ಮನೆಯಲ್ಲಿ ಉಳಿದುಕೊಂಡು, ಬದುಕಿಗಾಗಿ ಪರಿತಪಿಸುತ್ತಿರುವ ನೀಲಮ್ಮ ಮತ್ತು ಮೂವರು ಹೆಣ್ಣುಮಕ್ಕಳು ನೆರವಿಗಾಗಿ ಇನ್ನಿಲ್ಲದಂತೆ ಎದುರು ನೋಡುತ್ತಿದ್ದಾರೆ. ಪ್ರತಿದಿನ ಬೆಳಗ್ಗೆಯಿಂದ ಸಂಜೆವರೆಗೆ ಗ್ರಾಪಂ ಮುಂದೆಯೇ ಬಿಡಾರ ಹೂಡುತ್ತಿದ್ದಾರೆ. ಯಾರೊಬ್ಬರೂ ಸ್ಪಂದಿಸದೆ ಇರುವುದರಿಂದ ರೋಸಿಹೋಗಿ ಕೊನೆಗೆ ಗುರುವಾರ ತಹಸೀಲ್ದಾರ್ ಎಂ.ಕುಮಾರಸ್ವಾಮಿಯವರನ್ನು ಭೇಟಿಯಾಗಲು ಮಕ್ಕಳೊಂದಿಗೆ ತಹಸಿಲ್ದಾರ್ ಕಚೇರಿಗೆ ಬಂದು ಯಾವುದೇ ಪ್ರಯೋಜನವಾಗದೆ ಹಿಂತಿರುಗಿದ್ದಾರೆ.

ಸ್ಥಳ ಹುಡುಕಾಟ: ನೀಲಮ್ಮ ಕುಟುಂಬಕ್ಕೆ ತಾತ್ಕಾಲಿಕವಾಗಿ ವ್ಯವಸ್ಥೆ ಕಲ್ಪಿಸಲು ಕಂದಾಯ ಹಾಗೂ ಗ್ರಾಪಂ ಅಧಿಕಾರಿಗಳು ಸ್ಥಳ ಹುಡುಕಾಟ ನಡೆಸಿದ್ದಾರೆ. ಪಿಡಿಒ ವೆಂಕಟೇಶ, ಕಂದಾಯ ನಿರೀಕ್ಷಕಿ ಸಂಗಮ್ಮ ಹಿರೇಮಠ, ಗ್ರಾಮ ಲೆಕ್ಕಾಧಿಕಾರಿಗಳಾದ ಮಂಜುನಾಥ ರಾಠೋಡ, ಗಂಗಪ್ಪ ಅವರು ಬೂದಗುಂಪಾ, ಹಾಲಸಮುದ್ರ, ತಿಮ್ಮಾಪೂರ ಗ್ರಾಮಗಳಲ್ಲಿರುವ ಗ್ರಾಮಠಾಣ ಸ್ಥಳಗಳಲ್ಲಿ ಹಾಗೂ ಆಶ್ರಯ ಯೋಜನೆಗಾಗಿ ಮಂಜೂರಾಗಿದೆ ಎನ್ನಲಾಗುತ್ತಿರುವ ಬೂದಗುಂಪಾದ ಸರ್ವೇ ನಂ.183ರಲ್ಲಿ ಸ್ಥಳ ಹುಡುಕಾಟ ನಡೆಸಿದ್ದಾರೆ.

ಕೈತೊಳೆದುಕೊಳ್ಳಲು ಯತ್ನ: ತಾತ್ಕಾಲಿಕ ವ್ಯವಸ್ಥೆಗೆ ಮುಂದಾಗಿರುವ ಅಧಿಕಾರಿಗಳು ಗ್ರಾಮಠಾಣ, ಸರ್ವೇ ನಂ.183 ಸೇರಿದಂತೆ ಯಾವುದಾದರೊಂದು ಸರ್ಕಾರಿ ಜಾಗದಲ್ಲಿ ಶೆಡ್ ಹಾಕಿಕೊಟ್ಟು ಕೈತೊಳೆದುಕೊಳ್ಳಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಕೇವಲ ನಿವೇಶನ ಒದಗಿಸಲಿದ್ದು ಹಕ್ಕುಪತ್ರ ನೀಡಲಾಗುವುದಿಲ್ಲ ಎನ್ನುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ. ಇದರಿಂದ ಶಾಶ್ವತ ನೆಲೆಯಿಲ್ಲದೇ ಅಭದ್ರತೆಯಲ್ಲೇ ಕುಟುಂಬವನ್ನು ಸಿಲುಕಿಸಿದಂತಾಗುತ್ತದೆ.

ನಿವೇಶನದ ಜತೆಗೆ ಹಕ್ಕುಪತ್ರ ನೀಡಿದರೆ ಮಾತ್ರ ನಾವು ವಾಸಿಸುತ್ತೇವೆ. ಕೇವಲ ನಿವೇಶನ ನೀಡಿದರೆ, ಮುಂದೆಯೂ ನಮ್ಮನ್ನು ಒಕ್ಕಲೆಬ್ಬಿಸುವುದಿಲ್ಲ ಎನ್ನುವುದಕ್ಕೆ ಯಾವ ಭರವಸೆಯೂ ಇಲ್ಲ. ಆಡಳಿತ ಮಾಡೋರು ಯಾವಾಗ ಕಣ್ಣು ತೆರೆಯುತ್ತಾರೋ?

ನೀಲಮ್ಮ ಹೋಟೆಲ್

ಮನೆ ಕಳೆದುಕೊಂಡ ಸಂತ್ರಸ್ತೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net