

ಕಾರಟಗಿ: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವ ಬೇಡಿಕೆಯನ್ನು ರಾಜ್ಯ ಸರ್ಕಾರ ಆದಷ್ಟು ಬೇಗ ಈಡೇರಿಸಲಿದೆ ಎಂದು ಶಾಸಕ ಬಸವರಾಜ ದಢೇಸುಗೂರು ಅಭಿಪ್ರಾಯಪಟ್ಟರು.
ಪಟ್ಟಣದ ಪುರಸಭೆ ಕಚೇರಿಯಲ್ಲಿ ಏರ್ಪಡಿಸಿದ್ದ ವೀರರಾಣಿ ಕಿತ್ತೂರು ಚನ್ನಮ್ಮ ಜಯಂತಿ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದರು. ಹಲವು ಸಮುದಾಯಗಳು ಮೀಸಲಾತಿಗಾಗಿ ಸರ್ಕಾರದ ಮುಂದೆ ಪ್ರಸ್ತಾವನೆ ಇಟ್ಟಿವೆ. ಪಂಚಮಸಾಲಿ ಸಮುದಾಯದ ಬೇಡಿಕೆ ಈಡೇರಿಸಲು ಶಾಶ್ವತ ಹಿಂದುಳಿದ ವರ್ಗಗಳ ಆಯೋಗದಿಂದ ಈಗಾಗಲೇ ಜಿಲ್ಲಾವಾರು ಅಧ್ಯಯನ ನಡೆಯುತ್ತಿದೆ. ವರದಿ ಸರ್ಕಾರದ ಕೈ ಸೇರಿದ ಕೂಡಲೇ ಬಹುದಿನಗಳ ಬೇಡಿಕೆಯನ್ನು ಈಡೇರಿಸಲಾಗುತ್ತದೆ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಈ ಮೀಸಲಾತಿ ಹೆಚ್ಚಳದ ಸಲುವಾಗಿ ಎಲ್ಲ ಶಾಸಕರೊಂದಿಗೆ ಸುದೀರ್ಘವಾಗಿ ಚರ್ಚಿಸಿದ್ದಾರೆ. ಬ್ರಿಟಿಷರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿದ ಚನ್ನಮ್ಮಳ ಜೀವನ ಪ್ರತಿಯೊಬ್ಬರಿಗೂ ಮಾದರಿ ಎಂದು ತಿಳಿಸಿದರು.
ಜಿಪಂ ಮಾಜಿ ಅಧ್ಯಕ್ಷ ಅಮರೇಶ ಕುಳಗಿ, ಬಿಜೆಪಿ ಯುವಮೋರ್ಚಾ ಮಂಡಲ ಅಧ್ಯಕ್ಷ ಪಂಪನಗೌಡ ಜಂತಗಲ್, ಮುಖಂಡ ನಾಗರಾಜ ಬಿಲ್ಗಾರ್, ಸಮುದಾಯದ ಮುಖಂಡರಾದ ಚನ್ನಬಸಪ್ಪ ಸುಂಕದ್, ಪಾಲಾಕ್ಷಪ್ಪ ಕೆಂಡದ್, ವಿರೂಪಾಕ್ಷಪ್ಪ ಕಟಾಂಬ್ಲಿ ಮಾತನಾಡಿದರು. ಪ್ರಮುಖರಾದ ಗುಂಡಪ್ಪ ಕುಳಗಿ, ಬಸವನಗೌಡ, ರಮೇಶ ಅಯೋಧ್ಯೆ, ಶರಣಪ್ಪ ಅಯೋಧ್ಯ ಇತರರಿದ್ದರು.
ಬಿಜೆಪಿ ಕಚೇರಿ: ಪಟ್ಟಣದ ಬಿಜೆಪಿ ಮಂಡಲದ ಕಚೇರಿಯಲ್ಲಿ ರಾಣಿ ಚನ್ನಮ್ಮ ಜಯಂತಿ ಆಚರಿಸಲಾಯಿತು. ಶಾಸಕ ಬಸವರಾಜ ದಢೇಸುಗೂರು, ಬಿಜೆಪಿ ಯುವಮೋರ್ಚಾ ಮಂಡಲ ಅಧ್ಯಕ್ಷ ಪಂಪನಗೌಡ ಜಂತಗಲ್, ಮಹಿಳಾ ಮೋರ್ಚಾ ಮಂಡಲದ ಅಧ್ಯಕ್ಷೆ ಶಿವಲೀಲಾ ಅಯೋಧ್ಯೆ, ಪ್ರಮುಖರಾದ ಚನ್ನಬಸಪ್ಪ ಸುಂಕದ್, ರಾಜುಗೌಡ, ವಿರೂಪಾಕ್ಷಿ, ಶರಣಪ್ಪ, ಇತರರಿದ್ದರು.
ಬಸವೇಶ್ವರ ನಗರ: ಪಟ್ಟಣದ 9ನೇ ವಾರ್ಡ್ ಬಸವೇಶ್ವರ ನಗರದಲ್ಲಿ ಚನ್ನಮ್ಮ ಜಯಂತಿ ಆಚರಿಸಲಾಯಿತು. ಚನ್ನಮ್ಮ ನಾಮಫಲಕಕ್ಕೆ ಪೂಜೆ ಸಲ್ಲಿಸಲಾಯಿತು. ಮಹಿಳೆಯರು ಪೂರ್ಣಕುಂಭ, ಕಳಸದೊಂದಿಗೆ ಪಾಲ್ಗೊಂಡಿದ್ದರು. ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಕಾಂಗ್ರೆಸ್ ಮುಖಂಡ ವೆಂಕಟೇಶ ತಂಗಡಗಿ, ಪ್ರಮುಖರಾದ ಬಸವರಾಜ ತೊಂತನಾಳ, ಬಸವರಾಜ ಕೂಡ್ಲೂರು, ಮುತ್ತಣ್ಣ, ರವಿಕುಮಾರ, ಬಸವರಾಜ ಎಂ.ಬಿ.ನಗರ, ಬಸವರಾಜ ಹೊಸಮನಿ, ಮಾರ್ಕಂಡೇಶ ಸಾಸಲಮರಿ ಇತರರಿದ್ದರು.