ಎಸ್ಟಿ ಸಮಾವೇಶಕ್ಕೆ 15 ಸಾವಿರ ಜನ ಪ್ರಯಾಣ: ಶಾಸಕ ಬಸವರಾಜ ದಢೇಸುಗೂರು ಮಾಹಿತಿ

Basavaraja Dadesuguru
Published on

ಕಾರಟಗಿ: ಬಳ್ಳಾರಿಯಲ್ಲಿ ನ.20ರಂದು ನಡೆಯುವ ಎಸ್ಟಿ ಸಮಾವೇಶಕ್ಕೆ ಕ್ಷೇತ್ರದಿಂದ 15 ಸಾವಿರ ಜನರನ್ನು ಕರೆದೊಯ್ಯಲಾಗುವುದು ಎಂದು ಶಾಸಕ ಬಸವರಾಜ ದಢೇಸುಗೂರು ಹೇಳಿದರು.

ಪಟ್ಟಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮೀಸಲಾತಿ ಹೆಚ್ಚಳ ಬೇಡಿಕೆಯನ್ನು ಬಿಜೆಪಿ ಸರ್ಕಾರ ಈಡೇರಿಸಿದೆ. ಹಾಗಾಗಿ ಸರ್ಕಾರ ಹಾಗೂ ಬಿಜೆಪಿ ನಾಯಕರಿಗೆ ಕೃತಜ್ಞತೆ ತಿಳಿಸಲು ಸಮಾವೇಶಕ್ಕೆ ಕನಕಗಿರಿ ವಿಧಾನಸಭಾ ಕ್ಷೇತ್ರದಿಂದ 200 ಬಸ್, 150 ಕ್ರೂಸರ್ ಹಾಗೂ 200ಕ್ಕೂ ಅಧಿಕ ವೈಯಕ್ತಿಕ ಕಾರುಗಳಲ್ಲಿ 15 ಸಾವಿರ ಜನರು ತೆರಳಲಿದ್ದಾರೆ. ಸಮುದಾಯಗಳ ಬೇಡಿಕೆ ಈಡೇರಿಸದ ಕಾಂಗ್ರೆಸ್ ಶತಮಾನಗಳಿಂದಲೂ ರಾಜಕೀಯ ಲಾಭಕ್ಕೆ ಬಳಸಿಕೊಂಡು ಬಂದಿದೆ. ಈಗ ಬಿಜೆಪಿ ಸರ್ಕಾರ ನ್ಯಾಯಬದ್ಧವಾದ ಸಂವಿಧಾನಿಕ ಹಕ್ಕು ನೀಡಿದೆ ಎಂದು ತಿಳಿಸಿದರು.

ತಂಗಡಗಿ ವಿರುದ್ಧ ವಾಗ್ದಾಳಿ: ಮಾಜಿ ಸಚಿವ ಶಿವರಾಜ ತಂಗಡಗಿ ಅಧಿಕಾರ ನಡೆಸಿದ ಅನುಭವ ಇದ್ದರೂ ಸರಿಯಾದ ಕಾನೂನಿ ತಿಳಿವಳಿಕೆ ಇಲ್ಲ. ಅವರ ಜನ ಪ್ರತಿಜ್ಞಾ ಕಾರ್ಯಕ್ರಮದ ಬ್ಯಾನರ್‌ಗಳನ್ನು ನಾನೇಕೆ ತೆರವುಗೊಳಿಸಲಿ. ಸಂಬಂಧಿಸಿದ ಅಧಿಕಾರಿಗಳು ತೆರವು ಮಾಡಿದ್ದಾರೆ. ಅಧಿಕಾರ ಕಳೆದುಕೊಂಡು ಮನೆಯಲ್ಲಿ ಕುಳಿತಿರುವುದರಿಂದ ಅವರಿಗೆ ಮತಿಭ್ರಮಣೆಯಾಗಿ ಮನಬಂದಂತೆ ಮಾತನಾಡುತ್ತಿದ್ದಾರೆ. ನಾವು ಜನರ ಬಳಿ ಮತ ಬೇಡುವವರು. ಅವರೇ ನಿರ್ಣಾಯಕ. ಅವರ ಹೃದಯದಲ್ಲಿ ಯಾರಿದ್ದಾರೆಂದು 2023ರ ಚುನಾವಣೆ ನಿರ್ಧರಿಸಲಿದೆ ಎಂದು ಶಾಸಕ ದಢೇಸುಗೂರು ವಾಗ್ದಾಳಿ ನಡೆಸಿದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನವೀನ್ ಗುಳಗಣ್ಣನವರ್ ಮಾತನಾಡಿದರು. ಜಿಪಂ ಮಾಜಿ ಸದಸ್ಯ ವೀರೇಶ ಸಾಲೋಣಿ, ಕನಕಗಿರಿ ಮಂಡಲ ಅಧ್ಯಕ್ಷ ಮಹಾಂತೇಶ ಸಜ್ಜನ್, ವಿಶೇಷ ಎಪಿಎಂಸಿ ಮಾಜಿ ಸದಸ್ಯ ನಾಗರಾಜ ಅರಳಿ, ಮುಖಂಡರಾದ ಜಿ.ರಾಮಮೋಹನ, ದುರ್ಗರಾವ್, ಸಣ್ಣ ಕನಕಪ್ಪ, ವಾಗೇಶ ಹಿರೇಮಠ, ಮಂಜುನಾಥ ಮಸ್ಕಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net