

ಹುಬ್ಬಳ್ಳಿ : ಇಲ್ಲಿನ ಪೆಂಡಾರಗಲ್ಲಿಯ ಎಸ್.ಎಸ್.ಕೆ. ಮೆಲೋಡೀಸ್ ಸಂಸ್ಥೆ ವತಿಯಿಂದ ದೇಶಪಾಂಡೆ ನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ಫೆ. 23ರಂದು ಸಂಜೆ 4 ಗಂಟೆಗೆ ಹಿಂದಿ ಮತ್ತು ಕನ್ನಡ ಚಿತ್ರಗೀತೆಗಳ ಕರೋಕೆ ಸಂಗೀತ ಸಂಜೆ ಕಾರ್ಯಕ್ರಮ ಆಯೋಜಿಸಲಾಗಿದೆ.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಯೋಜಕ ರಾಜ ಕಠಾರೆ, ವಿಎಕೆ ಫೌಂಡೇಷನ್ ಪ್ರಾಯೋಜಕತ್ವದಲ್ಲಿ ಸಮಾಜದಲ್ಲಿ ತೆರೆಮರೆಯಲ್ಲಿರುವ ಕಲಾವಿದರನ್ನು ಪರಿಚಯಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ. ಜಾನಪದ ಗೀತೆ, ಭಾವಗೀತೆ, ಭಕ್ತಿಗೀತೆ, ಚಲನಚಿತ್ರ ಗೀತೆಗಳ ಜತೆಗೆ ಒಂದು ಇಂಗ್ಲಿಷ್ ಗೀತೆಯನ್ನೂ ಕಲಾವಿದರು ಪ್ರಸ್ತುತಪಡಿಸಲಿದ್ದಾರೆ. ಈ ಕಾರ್ಯಕ್ರಮಕ್ಕಾಗಿ ಎಸ್ಎಸ್ಕೆ ಸಮಾಜದ 22 ಕಲಾವಿದರನ್ನು ಆಯ್ಕೆ ಮಾಡಿದ್ದು, ಕಳೆದ ಒಂದೂವರೆ ತಿಂಗಳಿಂದ ನಿರಂತರ ಅಭ್ಯಾಸ ಮಾಡುತ್ತಿದ್ದಾರೆ ಎಂದು ಹೇಳಿದರು.
ಕರೋಕೆ ಸಂಗೀತ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವವರು ವೃತ್ತಿಪರ ಸಂಗೀತ ಕಲಾವಿದರಲ್ಲ. ಯಾರೊಬ್ಬರೂ ಸಂಗೀತವನ್ನೂ ಕಲಿತಿಲ್ಲ. ಹವ್ಯಾಸಕ್ಕಾಗಿ ಹಾಡುವವರಾಗಿದ್ದಾರೆ. ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಮಾಜದ ಕಲಾವಿದರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಗುವುದು ಎಂದು ತಿಳಿಸಿದರು.
ವಿಎಕೆ ಫೌಂಡೇಷನ್ನ ವೆಂಕಟೇಶ ಕಾಟವೆ ಮಾತನಾಡಿ, ಈ ಸಂಗೀತ ಸಂಜೆ ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿದ್ದು, ಎಲ್ಲ ಸಮಾಜದ ಜನರು ಪಾಲ್ಗೊಳ್ಳುವಂತೆ ಕೋರಿದರು.
ಎಸ್ಎಸ್ಕೆ ಮೆಲೋಡಿಸ್ನ ಅನಿಲ ಮಿಸ್ಕಿನ್, ಪ್ರಕಾಶ ಧಲಬಂಜನ, ರಾಘು ಭಾಂಡಗೆ, ಸಂಜಯ ಕಾಟವೆ ಸುದ್ದಿಗೋಷ್ಠಿಯಲ್ಲಿ ಇದ್ದರು.