

ವಿಜಯವಾಣಿ ಸುದ್ದಿಜಾಲ ಧಾರವಾಡ
ಸಂಗೀತವನ್ನು ಕಲಿಯಲು ಅತಿ ಸರಳ ಮಾಧ್ಯಮ ಕರೋಕೆ ಎಂದು ದೇವರಹುಬ್ಬಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಎಂ.ಜಿ. ಅಂಗಡಿ ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ರಾಜ್ಯೋತ್ಸವ ನಿಮಿತ್ತ ವೀಣಾ ಪತ್ತಾರ ಸಂಗೀತ ವರ್ಷಿಣಿ ಕಲಾ ತಂಡದ ವತಿಯಿಂದ ಆಯೋಜಿಸಿದ್ದ ಕರೋಕೆ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಎಲ್ಲ ಮನುಷ್ಯರಲ್ಲೂ ಲಯ, ರಾಗಗಳಿರುತ್ತವೆ. ಸಂಗೀತ ಪ್ರಿಯರಾಗಿರುತ್ತಾರೆ. ಆದರೆ ಎಲ್ಲರಿಗೂ ಅವಕಾಶಗಳು ಸಿಗುವುದಿಲ್ಲ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಕರೋಕೆ ಅನುಕೂಲಕರ ಮಾಧ್ಯಮವಾಗಿ ಹೊರಹೊಮ್ಮಿದೆ ಎಂದರು.
ಕೃಷ್ಣಾ ಕೊಳ್ಳಾನಟ್ಟಿ ಮಾತನಾಡಿ, ಸಂಗೀತ ಎಲ್ಲರಿಗೂ ಎಲ್ಲರ ಮನಸ್ಸಿಗೂ ಉಲ್ಲಾಸ ನೀಡುವ ಒಂದು ಸಾಧನ. ಎಷ್ಟೇ ಕಷ್ಟ, ದುಖಃ ಇದ್ದರೂ ಸಂಗೀತ ಕೇಳಿದರೆ ಮನಸ್ಸು ಪ್ರಫುಲ್ಲಗೊಳ್ಳುತ್ತದೆ. ಇತ್ತಿಚಿನ ದಿನಗಳಲ್ಲಿ ಸಾಮಾನ್ಯ ಮನುಷ್ಯನು ಸಹ ಅವಕಾಶ ಸಿಕ್ಕಾಗ ತನ್ನ ಪ್ರತಿಭೆ ಪ್ರಚುರಪಡಿಸುತ್ತಿದ್ದಾನೆ. ಇದಕ್ಕೆ ಕಾರಣ ಕರೋಕೆ ಮಾಧ್ಯಮ. ಎಲ್ಲರೂ ಮನೆಯಲ್ಲಿದ್ದುಕೊಂಡು ಯಾರ ಸಹಕಾರವಿಲ್ಲದೆ ಕರೋಕೆ ಉಪಯೋಗಿಸಿಕೊಂಡು ಹಾಡುಗಾರರಾಗಬಹುದು. ಇಂತಹ ಕಾರ್ಯಕ್ರಮಗಳಿಗೆ ಕರ್ನಾಟಕ ವಿದ್ಯಾವರ್ಧಕ ಸಂಘ ಅನುವು ಮಾಡಿಕೊಟ್ಟು ಹೊಸ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುತ್ತಿರುವುದು ಶ್ಲಾನೀಯ ಎಂದರು.
ಅತಿಥಿಯಾಗಿ ಪ್ರೊ. ಎಂ.ಐ. ಸಾವಂತ ಆಗಮಿಸಿದ್ದರು. ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಕಲಾವಿದರು ಕರೋಕೆ ಹಾಡುಗಳನ್ನು ಪ್ರಸ್ತುತಪಡಿಸಿದರು.
ಸತೀಶ ತುರಮರಿ ಸ್ವಾಗತಿಸಿದರು. ವೀಣಾ ಪತ್ತಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾರುತಿ ಬಡವಣ್ಣವರ ವಂದಿಸಿದರು.