ಮಾನವತಾವಾದಿ, ಪರಿಸರ ಪ್ರೇಮಿಯಾಗಿದ್ದ ಸಾಹಿತಿ ಕಾರಂತರು

Karantha 1
Published on

ಡಾ. ನಾರಾಯಣ ಸಭಾಹಿತ ಅನಿಸಿಕೆ

ಕಾರಂತರ ಜನ್ಮದಿನಾಚರಣೆ, ಕೃತಿ ಬಿಡುಗಡೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಕಾರಂತರು ನಡೆದಾಡುವ ವಿಶ್ವಕೋಶ. ಯಕ್ಷಗಾನದ ಮೇಲೆ ಅವರ ಪ್ರಯೋಗ, ಚಿಂತನೆಗಳು ಇಂದ್ರಾಳಿಯ ಯಕ್ಷಗಾನ ಕೇಂದ್ರದ ಮೂಲಕವೇ ಆಗುತ್ತಿತ್ತು. ಯಕ್ಷಗಾನ ಕೇಂದ್ರ ಹಾಗೂ ಕರಾವಳಿಯ ಯಕ್ಷಗಾನದ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿದ್ದಾರೆ. ಸಾಹಿತಿಯಾಗಿದ್ದರೂ ಅವರು ಮಾನವತಾವಾದಿ ಹಾಗೂ ಪರಿಸರ ಪ್ರೇಮಿಯಾಗಿದ್ದರು ಎಂದು ಮಾಹೆಯ ಸಹಕುಲಪತಿ ಡಾ. ನಾರಾಯಣ ಸಭಾಹಿತ ಅನಿಸಿಕೆ ವ್ಯಕ್ತಪಡಿಸಿದರು.

Karantha 2
ಉಡುಪಿಯ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಯಕ್ಷಗಾನ ಕೇಂದ್ರ ಇಂದ್ರಾಳಿ ಮತ್ತು ಮಾಹೆ ಆಶ್ರಯದಲ್ಲಿ ಶುಕ್ರವಾರ (ಅ.10) ಆಯೋಜಿಸಿದ್ದ ಡಾ. ಕೋಟ ಶಿವರಾಮ ಕಾರಂತ ಅವರ 123ನೇ ಜನ್ಮದಿನಾಚರಣೆ ಹಾಗೂ ಯಕ್ಷಗಾನ ಪೂರ್ವರಂಗ ಕೃತಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.

ಪ್ರಯೋಗಶೀಲ ವ್ಯಕ್ತಿತ್ವ

ಕಾಪು ಸರ್ಕಾರಿ ಪ್ರ.ದ. ಕಾಲೇಜಿನ ಕನ್ನಡ ಪ್ರಾಧ್ಯಾಪಕ ಪ್ರೊ. ರವಿರಾಜ ಶೆಟ್ಟಿ ಮಾತನಾಡಿ, ಕಾರಂತರು ತಮ್ಮ ಅಧ್ಯಯನದ ಕಾರಣಕ್ಕೆ 400ಕ್ಕೂ ಅಧಿಕ ಕೃತಿಗಳನ್ನು ಸಾರಸ್ವತ ಲೋಕಕ್ಕೆ ನೀಡಿದ್ದಾರೆ. ಯಕ್ಷಗಾನ, ನಾಟಕವನ್ನು ಭಿನ್ನವಾಗಿ ರೂಪಿಸಿದ ಪ್ರಯೋಗಶೀಲರು. ಅವರ ಸ್ಮರಣೆ ಸದಾ ಅಗತ್ಯ ಎಂದರು.

ಕೃತಿ ಬಿಡುಗಡೆ

Karantha 3
ಡಾ. ಶಿವಕುಮಾರ ಅಳಗೋಡು ವಿರಚಿತ ಯಕ್ಷಗಾನ ಪೂರ್ವರಂಗ ಕೃತಿ ಬಿಡುಗಡೆ ಮಾಡಲಾಯಿತು. ಹಿರಿಯ ವಿದ್ವಾಂಸ ಡಾ. ಪಾದೇಕಲ್ಲು ವಿಷ್ಣು ಭಟ್ಟ ಮಾತನಾಡಿ, ಯಕ್ಷಗಾನ

ಶಾಸ್ತ್ರೀಯ ಚೌಕಟ್ಟಿನಲ್ಲಿ ಬರುವ ಪ್ರಕಾರ. ಅದರ ಪೂರ್ವರಂಗದ ಕುರಿತು ಸಮಗ್ರ ಮಾಹಿತಿ ಒಳಗೊಂಡ ಅಧ್ಯಯನ ಗ್ರಂಥವಿದು ಎಂದರು. ಯಕ್ಷಗಾನ ಕೇಂದ್ರದ ಸಲಹಾ ಸಮಿತಿ ಅಧ್ಯಕ್ಷ ಪಳ್ಳಿ ಕಿಶನ್​ ಹೆಗ್ಡೆ, ಡಾ. ಶಿವಕುಮಾರ ಅಳಗೋಡು ಉಪಸ್ಥಿತರಿದ್ದರು.

ಗುರು ಉಮೇಶ ಸುವರ್ಣ ಮತ್ತು ಬಳಗದವರು ಪ್ರಾರ್ಥಿಸಿದರು. ಸಂಸ್ಥೆಯ ಆಡಳಿತಾಧಿಕಾರಿ ಡಾ. ಬಿ.ಜಗದೀಶ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಆರ್​ಆರ್​ಸಿಯ ಸಹ ಸಂಶೋಧಕ ಡಾ.ಅರುಣಎಸ್​.ಆರ್​. ಕಾರ್ಯಕ್ರಮ ನಿರೂಪಿಸಿದರು.

ಆರ್​ಆರ್​ಸಿ ವತಿಯಿಂದ ಕಾರಂತರ ಕುರಿತಾದ ಸಾಕ್ಷ್ಯಚಿತ್ರ ಹಾಗೂ ಕಾರಂತರ ಅಪೂರ್ವ ಭಾವಚಿತ್ರಗಳ ಪ್ರದರ್ಶನ ಆಯೋಜಿಸಲಾಗಿತ್ತು. ಸಭಾ ಕಾರ್ಯಕ್ರಮದ ಬಳಿಕ ಯಕ್ಷಗಾನದ ಖ್ಯಾತ ಕಲಾವಿದರ ಕೂಡುವಿಕೆಯಲ್ಲಿ ಭೀಷ್ಮೋತ್ಪತ್ತಿ ಯಕ್ಷಗಾನ ಪ್ರದರ್ಶನ ನಡೆಯಿತು.

ಜೀವವೈವಿಧ್ಯ ರಕ್ಷಣೆಗೆ ಹೋರಾಟ

Karantha Box
ಉತ್ತರ ಕನ್ನಡ ಜಿಲ್ಲೆಯ ಕೈಗಾದಲ್ಲಿ ಅಣು ಸ್ಥಾವರ ನಿರ್ಮಾಣದ ವಿರುದ್ಧ ಪ್ರತಿಭಟನೆಗೆ ಇಳಿದ ಮೊದಲಿಗರು ಕಾರಂತರು. ಅದಕ್ಕಾಗಿಯೇ ಲೋಕಸಭಾ ಚುನಾವಣೆಯಲ್ಲಿ ಕಾರವಾರದಿಂದ ಸ್ಪರ್ಧಿಸಿ, 60 ಸಾವಿರ ಮತ ಗಳಿಸಿ ಸೋತರೂ ಉತ್ತರ ಕನ್ನಡದ ಪರಿಸರಕ್ಕಾಗಿ ಹೋರಾಡಿದ ಮಹಾನುಭಾವರು. ನಾನು ರಾಜಕೀಯ ವ್ಯಾಮೋಹಿಯಲ್ಲ, ಪರಿಸರ ಹಾನಿಯ ವಿರೋಧಿ. ಕೈಗಾ ಅಣು ಸ್ಥಾವರ ಬಂದರೆ ಉತ್ತರ ಕನ್ನಡದ ಜೀವವೈವಿಧ್ಯ, ಕಾಡು, ಪರಿಸರ ನಾಶವಾಗುತ್ತದೆ. ಅದಕ್ಕಾಗಿ ನಾನು ಚುನಾವಣೆಗೆ ನಿಲ್ಲುತ್ತೇನೆ ಎಂದಿದ್ದರು. ಅವರಂತಹ ಚಿಂತಕರು, ಸಮಾಜಪ್ರೇಮಿಗಳನ್ನು ಈಗ ನಾವು ಕಾಣಲಾರೆವು ಎಂದು ಡಾ. ನಾರಾಯಣ ಸಭಾಹಿತ ಅಭಿಪ್ರಾಯಪಟ್ಟರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net