

ವಿಜಯವಾಣಿ ಸುದ್ದಿಜಾಲ ಉಡುಪಿ
ಡಾ.ಶಿವರಾಮ ಕಾರಂತ ಅವರ ಬದುಕು-ಬರಹಗಳಿಂದ ಯುವ ಪೀಳಿಗೆ ಅರಿತುಕೊಳ್ಳುವುದು ಬಹಳಷ್ಟಿದೆ. ನೃತ್ಯ, ಸಂಗೀತ, ಚಿತ್ರಕಲೆ, ಯಕ್ಷಗಾನ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದು ಪರಿಸರದ ಕುರಿತು ವಿಶೇಷ ಕಾಳಜಿ ಹೊಂದಿದ್ದರು. ನೇರ ನಡೆ-ನುಡಿಯೊಂದಿಗೆ ಬದುಕಿದ ರೀತಿ ಆದರ್ಶಮಯ. ಲೇಖಕ ಮಾತ್ರವಲ್ಲ, ಮಹಾನ್ 'ಸಂಸ್ಕೃತಿ' ಪುರುಷ ಎಂದು ಮಣಿಪಾಲ ಮಾಹೆಯ ಗಾಂಧಿ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ವರದೇಶ ಹಿರೇಗಂಗೆ ಅಭಿಮತ ವ್ಯಕ್ತಪಡಿಸಿದರು.
ಉಡುಪಿಯ ಎಂಜಿಎಂ ಸಂಧ್ಯಾ ಕಾಲೇಜಿನ ಸಭಾಂಗಣದಲ್ಲಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಡಾ. ಶಿವರಾಮ ಕಾರಂತ ಟ್ರಸ್ಟ್ ವತಿಯಿಂದ ಕಾರಂತರ 123ನೇ ಜನ್ಮದಿನದ ನಿಮಿತ್ತ ಶುಕ್ರವಾರ (ಅ.10) ಆಯೋಜಿಸಿದ್ದ ಕಾರಂತ ಅಧ್ಯಯನ ಶಿಬಿರ ಮತ್ತು ಯುವ ಬರಹಗಾರರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಡಾ. ಶಿವರಾಮ ಕಾರಂತ ಟ್ರಸ್ಟ್ನ ಅಧ್ಯಕ್ಷ ಡಾ.ಗಣನಾಥ ಶೆಟ್ಟಿ ಎಕ್ಕಾರು ಮಾತನಾಡಿ, ಕಾರಂತರ ಬರವಣಿಗೆಯ ಕಾಲದಲ್ಲಿದ್ದ ಭಾರತದ ಸಾಮಾಜಿಕ ಸ್ಥಿತಿ ಕುರಿತು ಅವರ ಕೃತಿ, ಕಾದಂಬರಿಗಳಿಂದ ಅರಿತುಕೊಳ್ಳಬಹುದು. ಬರಹದ ಮೂಲಕವೇ ಅಸಮಾನತೆ, ಆಸ್ಪೃಶ್ಯತೆ, ಸಾಮಾಜಿಕ ಸಮಸ್ಯೆಗಳನ್ನು ಅಭಿವ್ಯಕ್ತಗೊಳಿಸಿದ ಒಂಟಿಸಲಗ ಅವರು. ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ, ವೈಚಾರಿಕ ಚಿಂತನೆ ಬೆಳೆಸುವಲ್ಲಿ ಕಾರಂತ ಕೃತಿಗಳು ಮಹತ್ತರ ಕೊಡುಗೆಯಾಗಿದೆ ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ.ದೇವಿದಾಸ್ ಎಸ್. ನಾಯಕ ಅಧ್ಯಕ್ಷತೆ ವಹಿಸಿದ್ದರು. ಅಕಾಡೆಮಿ ಆಫ್ ಜನರಲ್ ಎಜುಕೇಶನ್ನ ಆಡಳಿತಾಧಿಕಾರಿ ಡಾ.ಕೆ.ಶ್ರೀಧರ ಆರ್. ಪೈ, ಸಂಪನ್ಮೂಲ ವ್ಯಕ್ತಿಗಳಾಗಿ ಉಪನ್ಯಾಸಕಿ ಸುಧಾ ಆಡುಕಳ, ನಿವೃತ್ತ ಹಿರಿಯ ಉಪ ಸಂಪಾದಕ ನಿತ್ಯಾನಂದ ಪಡ್ರೆ, ಟ್ರಸ್ಟ್ನ ಸದಸ್ಯರಾದ ಸತೀಶ ಕೊಡವೂರು, ಜಿ.ಎಂ. ಶರೀಫ್ ಹೂಡೆ, ಸಂತೋಷ ನಾಯಕ ಪಟ್ಲ ಉಪಸ್ಥಿತರಿದ್ದರು.
ಭೂಮಿಕಾ, ಪ್ರಜ್ಞಾ, ಪ್ರಸಿಜಾ ನಾಡಗೀತೆ ಹಾಡಿದರು. ಡಾ. ಶಿವರಾಮ ಕಾರಂತ ಟ್ರಸ್ಟ್ನ ಸದಸ್ಯ ಕಾರ್ಯದರ್ಶಿ ಪೂರ್ಣಿಮಾ ಪ್ರ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಮಧುರಾ ಕಾರ್ಯಕ್ರಮ ನಿರೂಪಿಸಿದರು. ಪ್ರಜ್ಞಾ ವಂದಿಸಿದರು.
ಕಾರಂತರ ಸಾಹಿತ್ಯ, ಬದುಕು ಸಾಗರದಷ್ಟು ಆಳ-ಅಗಲ. ಆಕಾಶದಷ್ಟು ಎತ್ತರವಾಗಿದ್ದು ಬಿಂಬ-ಪ್ರತಿಬಿಂಬ ಹೊಂದಿದೆ. ಶತಮಾನ ಕಂಡ ಮೇರು ವ್ಯಕ್ತಿತ್ವ. ಪ್ರಜಾಪ್ರಭುತ್ವವಾದಿಯಾಗಿ ರಾಜಕೀಯ ಪ್ರಜ್ಞೆಯೊಂದಿಗೆ ಠಾಗೋರ್ರಂತೆ ಪ್ರಭಾವಿಯಾಗಿದ್ದರು. | ಡಾ. ವರದೇಶ ಹಿರೇಗಂಗೆ. ಗಾಂಧಿ ಅಧ್ಯಯನ ಕೇಂದ್ರದ ನಿರ್ದೇಶಕ