

ವಿಜಯವಾಣಿ ಸುದ್ದಿಜಾಲ ಉಡುಪಿ
ಕನ್ನಡ ಸಾಹಿತ್ಯದಲ್ಲಿ ಡಾ.ಶಿವರಾಮ ಕಾರಂತ ಅವರದು ವಿಶಿಷ್ಟ ದಾರಿ. ಬುದ್ಧ, ಗಾಂಧೀಜಿಯಂತೆ ಪ್ರಯೋಗಗಳ ಮೂಲಕವೇ ಎಲ್ಲ ಕಲಿತು ವ್ಯಕ್ತಿತ್ವ ರೂಪಿಸಿಕೊಂಡವರು. ಯುವ ಜನರ ವ್ಯಕ್ತಿತ್ವದ ಬೆಳವಣಿಗೆಗೆ ಕಾರಂತರ ದಾರಿ ಮಾದರಿಯಾಗಿದೆ ಎಂದು ಖ್ಯಾತ ವಿಮರ್ಶಕ ಡಾ. ಎಸ್.ಆರ್. ವಿಜಯಶಂಕರ್ ಅಭಿಪ್ರಾಯಪಟ್ಟರು.
ಕಾರ್ಕಳದ ಕೋಟಿ ಚೆನ್ನಯ ಥೀಂ ಪಾರ್ಕ್ನ ಆವರಣದಲ್ಲಿ ಕಾರ್ಕಳ ಯಕ್ಷ ರಂಗಾಯಣ ಮತ್ತು ಡಾ. ಶಿವರಾಮ ಕಾರಂತ ಟ್ರಸ್ಟ್ನ ವತಿಯಿಂದ ಭಾನುವಾರ (ಅ.12) ಆಯೋಜಿಸಿದ್ದ ಕಾರಂತ ಉಪನ್ಯಾಸ ಮತ್ತು ಕಾರಂತ ರಂಗ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಟ್ರಸ್ಟ್ನ ಅಧ್ಯಕ್ಷ ಡಾ.ಗಣನಾಥ ಶೆಟ್ಟಿ ಎಕ್ಕಾರು ಆಶಯ ಮಾತನಾಡಿದರು. ರಂಗಾಯಣದ ನಿರ್ದೇಶಕ ವೆಂಕಟರಮಣ ಐತಾಳ ಅಧ್ಯಕ್ಷತೆ ವಹಿಸಿದ್ದರು. ಭುವನೇಂದ್ರ ಕಾಲೇಜಿನ ಪ್ರಾಂಶುಪಾಲ ಮಂಜುನಾಥ ಕೋಟ್ಯಾನ್ ಉಪಸ್ಥಿತರಿದ್ದರು.
ಸೌಮ್ಯಾ ಕಾರ್ಯಕ್ರಮ ನಿರೂಪಿಸಿದರು. ಚಂದ್ರನಾಥ ಬಜೆಗೋಳಿ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ನಿರ್ದಿಗಂತ ತಂಡದವರಿಂದ ಶಿವರಾಮ ಕಾರಂತರ ಕಾದಂಬರಿ ಆಧಾರಿತ ಮೈಮನಗಳ ಸುಳಿಯಲ್ಲಿ ನಾಟಕ ಪ್ರದರ್ಶನಗೊಂಡಿತು.