

ಉಡುಪಿ: ಕೋಟತಟ್ಟು ಗ್ರಾಮ ಪಂಚಾಯಿತಿ, ಡಾ. ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ ವತಿಯಿಂದ ನೀಡಲಾಗುವ ಡಾ. ಶಿವರಾಮ ಕಾರಂತ ಹುಟ್ಟೂರ ಪುರಸ್ಕಾರಕ್ಕೆ ತೂಗು ಸೇತುವೆ ಸರದಾರ ಸುಳ್ಯದ ಗಿರೀಶ್ ಭಾರದ್ವಾಜ್ ಆಯ್ಕೆಯಾಗಿದ್ದಾರೆ.
ಪ್ರೆಸ್ ಕ್ಲಬ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಆಯ್ಕೆ ಸಮಿತಿ ಸದಸ್ಯ ಯು. ಎಸ್. ಶೆಣೈ, ಸೇತುಬಂಧು ಎಂದು ಕರೆಯಲ್ಪಡುವ ಗಿರೀಶ್ ಅವರು ಗ್ರಾಮೀಣ ಜನರ ಜೀವನದಲ್ಲಿ ಹೊಸ ಬೆಳಕು ಮೂಡಿಸಿ 130 ತೂಗು ಸೇತುವೆ ನಿರ್ಮಾಣ ಮಾಡಿದ್ದಾರೆ. ಸಮಾಜ ಸೇವೆಯಲ್ಲೂ ಕ್ರಿಯಾಶೀಲರಾಗಿದ್ದು, ಕೇಂದ್ರ ಸರ್ಕಾರದ ಪದ್ಮಶ್ರೀ ಹಾಗೂ ರಾಜ್ಯ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ ಎಂದರು.
ಕಾರಂತ ಜನ್ಮದಿನೋತ್ಸವ ಅಂಗವಾಗಿ ಕೋಟ ಶಿವರಾಮ ಕಾರಂತ ಥೀಂ ಪಾರ್ಕ್ ನಲ್ಲಿ ಅ. 1 ರಿಂದ 10 ರವರೆಗೆ ಆನ್ಲೈನ್ ಮೂಲಕ ವಿವಿಧ ಸಾಂಸ್ಕೃತಿಕ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅ. 10ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ತಿಳಿಸಿದರು.
ಕೋಟ ಕಾರಂತ ಥೀಮ್ ಪಾರ್ಕ್ ವಿಶೇಷ ಕರ್ತವ್ಯಾಧಿಕಾರಿ ಪೂರ್ಣಿಮಾ, ಕೋಟತಟ್ಟು ಗ್ರಾಪಂ ಅಧ್ಯಕ್ಷೆ ಅಶ್ವಿನಿ ದಿನೇಶ್, ಉಪಾಧ್ಯಕ್ಷ ವಾಸು ಪೂಜಾರಿ, ಪಿಡಿಒ ಶೈಲ ಪೂಜಾರಿ ಉಪಸ್ಥಿತರಿದ್ದರು.