ಕಾರಂತ ಲೇಔಟ್​​ : ನ್ಯಾ.ಚಂದ್ರಶೇಖರ್ ನಿಗಾ ಸಮಿತಿ ಬರ್ಕಾಸ್ತು

bda office
Published on

ಬೆಂಗಳೂರು: ಬಿಡಿಎ ರಚಿತ ಡಾ. ಶಿವರಾಮ ಕಾರಂತ ಬಡಾವಣೆಯ ಭೂಸ್ವಾಧೀನ, ಕಟ್ಟಡಗಳ ಪರಿಶೀಲನೆ ಕಾರ್ಯಕ್ಕೆ ನಿಗಾ ವಹಿಸಲು ರಚಿಸಿದ್ದ ನ್ಯಾ. ಎ.ವಿ.ಚಂದ್ರಶೇಖರ್ ನೇತೃತ್ವದ ಸಮಿತಿಯನ್ನು ಬರ್ಕಾಸ್ತು ಮಾಡಲು ಸುಪ್ರೀಂಕೋರ್ಟ್ ನಿರ್ಧರಿಸಿದೆ. ಇದೇ ವೇಳೆ ಹೈಕೋರ್ಟ್‌ನಲ್ಲಿ ಪೀಠವೊಂದನ್ನು ರಚಿಸಿ ಸಂಬಂಧಿತ ವಿಷಯಗಳ ಆಲಿಕೆಗೆ ಅವಕಾಶ ಒದಗಿಸುವಂತೆ ಆದೇಶ ನೀಡಿದೆ.

ಇದೇ ತಿಂಗಳ 31ರಂದು ನ್ಯಾ. ಚಂದ್ರಶೇಖರ್ ಸಮಿತಿಯ ಅವಧಿ ಕೊನೆಗೊಳ್ಳಲಿತ್ತು. ಬಡಾವಣೆಯಲ್ಲಿ ಹಲವು ಕಾರ್ಯಗಳು ಪ್ರಗತಿಯಲ್ಲಿರುವುದರಿಂದ ಇನ್ನೂ ಕೆಲ ಕಾಲ ಸಮಿತಿಯನ್ನು ಮುಂದುವರಿಸುವಂತೆ ಅರ್ಜಿಯೊಂದು ಸುಪ್ರೀಂಕೋರ್ಟ್‌ಗೆ ಸಲ್ಲಿಕೆಯಾಗಿತ್ತು. ಇದನ್ನು ಆಲಿಸಿದ ನ್ಯಾ. ಸಂಜೀವ್ ಖನ್ನಾ ಹಾಗೂ ನ್ಯಾ. ಎಸ್.ವಿ.ಎನ್.ಭಟ್ಟಿ ಅವರಿದ್ದ ವಿಭಾಗೀಯ ಪೀಠವು ನ್ಯಾ.ಚಂದ್ರಶೇಖರ್ ಸಮಿತಿಯ ಕಾರ್ಯವನ್ನು ಕೊನೆಗೊಳಿಸುವುದಾಗಿ ಪ್ರಕಟಿಸಿತು.

ಸುಪ್ರೀಂಕೋರ್ಟ್‌ನ ಈ ಆದೇಶದಿಂದಾಗಿ ಹೈಕೋರ್ಟ್ ಸಿಜೆ ಅವರು ಹೊಸ ಪೀಠ ರಚಿಸುವವರಿದ್ದಾರೆ.

ಈಗಾಗಲೇ ಬಡಾವಣೆ ರಚನೆಗೆ ಸಂಬಂಧಿಸಿದಂತೆ ಭೂಸ್ವಾಧೀನ ಕಾರ್ಯ ಬಹುತೇಕ ಅಂತಿಮ ಹಂತದಲ್ಲಿದೆ. ಅಂತಿಮ ಅಧಿಸೂಚನೆ ಮುನ್ನ ರವಿನ್ಯೂ ಜಮೀನಿನಲ್ಲಿ ನಿರ್ಮಿಸಿರುವ ಕಟ್ಟಡಗಳ ಸಕ್ರಮ ಕಾರ್ಯವೂ ಪೂರ್ಣಗೊಂಡಿದೆ. ಸದ್ಯ ಲೇಔಟ್‌ನಲ್ಲಿ ಸಿವಿಲ್ ಕಾಮಗಾರಿ ಒಂಬತ್ತು ಪ್ಯಾಕೇಜ್‌ಗಳಲ್ಲಿ ಪ್ರಗತಿಯಲ್ಲಿದೆ. ಇದರ ಮೇಲೆಯೂ ಸಮಿತಿಯು ಮೇಲ್ವಿಚಾರಣೆ ನಡೆಸಿತ್ತು. ಪ್ರಸ್ತುತ ಬಡಾವಣೆಯು ಒಂದು ಹಂತಕ್ಕೆ ಬಂದಿದ್ದು, ಕಾಮಗಾರಿ ಮುಂದಿನ ಹಂತಗಳನ್ನು ಬಿಡಿಎ ಇನ್ನಷ್ಟು ಚುರುಕಿನಿಂದ ನಡೆಸಬೇಕಿದೆ.

ಶೀಘ್ರ ಪರಿಹಾರ ವಿತರಣೆ:

ಕಾರಂತ ಬಡಾವಣೆ ರಚಿಸಲು ಯಲಹಂಕ ಹಾಗೂ ಬೆಂಗಳೂರು ಉತ್ತರ ತಾಲೂಕಿನ ಒಟ್ಟು 17 ಗ್ರಾಮಗಳಿಗೆ ಸೇರಿದ 3,546.12 ಎಕರೆ ಭೂಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ಭೂಮಾಲೀಕರಿಗೆ ಪ್ರತಿ ಎಕರೆಗೆ ಶೇ.40 ಅಭಿವೃದ್ಧಿಪಡಿಸಿದ ನಿವೇಶನಗಳನ್ನು ಪರಿಹಾರ ರೂಪದಲ್ಲಿ ನೀಡಬೇಕಿದೆ. ಇದಕ್ಕೆ ಹೆಚ್ಚಿನ ಭೂಮಾಲೀಕರು ಒಪ್ಪಿಗೆ ಸೂಚಿಸಿದ್ದು, ಕೆಲವರಷ್ಟೇ ಅಪಸ್ವರ ಎತ್ತಿದ್ದಾರೆ. ಆದರೂ, ನ್ಯಾಯಾಲದ ಆದೇಶದ ಹಿನ್ನೆಲೆಯಲ್ಲಿ ಪರಿಹಾರವನ್ನು ವಿತರಿಸಲು ಬಿಡಿಎ ಮುಂದಾಗಿದೆ. ಮುಂದಿನ ವರ್ಷದ ಆರಂಭದಲ್ಲಿ ಭೂ ದಾಖಲಾತಿ ಒದಗಿಸುವ ರೈತರಿಗೆ ಪರಿಹಾರದ ಸೈಟ್‌ಗಳನ್ನು ವಿತರಿಸಲು ಪ್ರಾಧಿಕಾರವು ಚಿಂತನೆ ನಡೆಸಿದೆ.

ನಾಗರಿಕರಿಗೆ ಸೈಟ್ ಹಂಚಿಕೆ ನಿಧಾನ:

ಬಡಾವಣೆಯಲ್ಲಿ ಒಟ್ಟು 34 ಸಾವಿರ ಸೈಟ್‌ಗಳನ್ನು ರಚಿಸಲಾಗುತ್ತಿದ್ದು, ನಾಗರಿಕರಿಗೆ 15 ಸಾವಿರದಷ್ಟು ನಿವೇಶನಗಳು ಲಭ್ಯವಾಗಲಿವೆ. ನಾಗರಿಕರಿಗಿಂತ ಜಮೀನು ಬಿಟ್ಟುಕೊಟ್ಟಿರುವ ರೈತರಿಗೆ ಮೊದಲು ಪರಿಹಾರದ ಸೈಟ್‌ಗಳನ್ನು ವಿತರಿಸಲು ನ್ಯಾ.ಚಂದ್ರಶೇಖರ್ ಸಮಿತಿ ನಿರ್ಧರಿಸಿದೆ. ಇದಕ್ಕೆ ಬಿಡಿಎ ಕೂಡ ಸಮ್ಮತಿಸಿದ್ದು, ಆ ಬಳಿಕವಷ್ಟೇ ಸಾರ್ವಜನಿಕರಿಗೆ ಸೈಟ್ ಹಂಚಿಕೆ ಮಾಡುವ ಪ್ರಕ್ರಿಯೆ ಆರಂಭವಾಗಲಿದೆ ಎಂದು ಬಿಡಿಎ ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net