

ಮಂಗಳೂರು : ಸಾಹಿತ್ಯ ಹಾಗೂ ವಿಜ್ಞಾನ ಭಿನ್ನ ಕ್ಷೇತ್ರವಾಗಿದ್ದರೂ ಇವೆರಡರ ಗುರಿ ಸತ್ಯಾನ್ವೇಷಣೆಯಾಗಿದೆ. ಇವುಗಳ ಸಮ್ಮಿಲನದಿಂದ ಹೊಸ ವಿಚಾರಗಳನ್ನು ಅರಿತು ದೂರದರ್ಶನದ ಥಟ್ ಅಂತ ಹೇಳಿ ಕಾರ್ಯಕ್ರಮದಲ್ಲಿ ಪ್ರಶ್ನೆಗಳ ಮೂಲಕ ಜ್ಞಾನ ಹಂಚುವ
ಕಾರ್ಯ ಮಾಡುತ್ತಾ ಬರುತ್ತಿದ್ದೇನೆ ಎಂದು ಹಿರಿಯ ಸಾಹಿತಿ ಡಾ.ನಾ. ಸೋಮೇಶ್ವರ ಹೇಳಿದರು.
ಕಲ್ಕೂರ ಪ್ರತಿಷ್ಠಾನ ವತಿಯಿಂದ ನಗರದ ಕೊಡಿಯಾಲ್ ಪತ್ತುಮುಡಿ ಸೌಧದಲ್ಲಿ ಮಂಗಳವಾರ ನಡೆದ ಶಿವರಾಮ ಕಾರಂತ
ಹುಟ್ಟುಹಬ್ಬ ಸಮಾರಂಭದಲ್ಲಿ ‘ಕಾರಂತ ಪ್ರಶಸ್ತಿ’ ಸ್ವೀಕರಿಸಿ ಮಾತನಾಡಿದ ಅವರು ‘ ಸಾಹಿತ್ಯ ಹಾಗೂ ವಿಜ್ಞಾನವನ್ನು
ಕೇಂದ್ರೀಕರಿಸಿದ ಪ್ರಶ್ನೆಗಳ ಜತೆಗೆ ನೆಲದ ಸಂಸ್ಕೃತಿ ಮತ್ತು ಬದುಕಿಗೆ ಸಂಬಂಧಿಸಿದ ವಿಚಾರಗಳನ್ನು ನೀಡುವ ಪ್ರಯತ್ನ ಮಾಡಿದ್ದೇನೆ ಎಂದರು.
ನಿಟ್ಟೆ ಪರಿಗಣಿತ ವಿಶ್ವ ವಿದ್ಯಾಲಯದ ಕುಲಾಧಿಪತಿ ಡಾ.ವಿನಯ ಹೆಗ್ಡೆ ಪ್ರಶಸ್ತಿ ಪ್ರದಾನ ಮಾಡಿದರು.ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಕಾರ್ಯಕ್ರಮ ಉದ್ಘಾಟಿಸಿದರು. ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ಆಶೀರ್ವಚನ ನೀಡಿದರು. ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್.ಪ್ರದೀಪ್ ಕುಮಾರ್ ಕಲ್ಕೂರ ಅಧ್ಯಕ್ಷತೆ ವಹಿಸಿದ್ದರು. ವಿದ್ವಾಂಸ ಡಾ. ಎಂ. ಪ್ರಭಾಕರ ಜೋಶಿ ಅವರು ಕಾರಂತರ ಸಂಸ್ಮರಣೆ ಮಾಡಿದರು.ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ಮಾಜಿ ಎಂಎಲ್‌ಸಿ ಕ್ಯಾ.ಗಣೇಶ್ ಕಾರ್ಣಿಕ್, ಕೊಂಕಣಿ ಅಕಾಡೆಮಿಯ ಮಾಜಿ ಅಧ್ಯಕ್ಷ ರೋಯ್ ಕ್ಯಾಸ್ಟೊಲಿನೊ, ಉಡುಪಿಯ ಸುಹಾಸಂ ಅಧ್ಯಕ್ಷ ಎಚ್.ಶಾಂತಾರಾಜ ಐತಾಳ್ , ಉದ್ಯಮಿ ಪತ್ತುಮುಡಿ ಸೂರ್ಯನಾರಾಯಣ ರಾವ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಡಾ.ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.