ಧರ್ಮಗುರುಗಳ ರಕ್ಷಣೆ ನಮ್ಮೆಲ್ಲರ ಹೊಣೆ - ಕಾರಂಜಿಮಠದ ಗುರುಸಿದ್ದ ಸ್ವಾಮೀಜಿ

01
Published on

ಬೆಳಗಾವಿ: ಧರ್ಮ, ಶಿಕ್ಷಣ ಪ್ರಸಾರ ಮಾಡಿದ್ದ ಸಾತ್ವಿಕ ಮುನಿಗಳನ್ನು ಬರ್ಬರವಾಗಿ ಹತ್ಯೆ ಮಾಡಿರುವುದು ನಮಗೆಲ್ಲ ನೋವು ತಂದಿದೆ. ಅದನ್ನು ಒಕ್ಕೊರಲಿನಿಂದ ಖಂಡಿಸುತ್ತೇವೆ. ಯಾವುದೇ ಧರ್ಮದ ಗುರುಗಳ ರಕ್ಷಣೆ ಮಾಡುವುದು ಸರ್ಕಾರ ಮತ್ತು ಸಮಾಜದ ಜವಾಬ್ದಾರಿ ಎಂದು ಕಾರಂಜಿಮಠದ ಗುರುಸಿದ್ದ ಸ್ವಾಮೀಜಿ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಕರಣದ ಆರೋಪಿಗಳನ್ನು ಸಮಗ್ರವಾಗಿ ವಿಚಾರಣೆ ಮಾಡಬೇಕು. ಯಾವ ಕಾರಣಕ್ಕೆ ಹತ್ಯೆಯಾಗಿದೆ ಎಂಬುದನ್ನು ಪತ್ತೆ ಹಚ್ಚಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಮುಂದೆ ಈ ರೀತಿ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಗಣೇಶಪುರದ ರುದ್ರಕೇಸರಿ ಮಠದ ಹರಿಗುರು ಮಹಾರಾಜ ಮಾತನಾಡಿ, ಸಾಧು, ಸಂತರ ಹತ್ಯೆ ಮಾಡಿ ಜಿಹಾದಿಗಳು ವಿಕೃತಿ ಮೆರೆದರೆ ಹಿಂದುತ್ವ ನಾಶವಾಗುವುದಿಲ್ಲ. ಎಲ್ಲ ಸಾಧು, ಸಂತರು ಮಠ ಬಿಟ್ಟು ಹಿಂದುತ್ವ ಕಟ್ಟಲು ಹೊರಗಡೆ ಬಂದು ಹೋರಾಟ ನಡೆಸಬೇಕು. ಮುಂಬರುವ ದಿನಗಳಲ್ಲಿ ಹಿಂದುಗಳ ರಕ್ಷಣೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿ. ಹಿಂದುಗಳು ಮನೆಯಲ್ಲಿ ಕುಳಿತುಕೊಂಡರೆ ಹಿಂದು ಧರ್ಮ ಉಳಿಯುವುದಿಲ್ಲ, ನಾವೆಲ್ಲ ಜಾಗೃತರಾಗಬೇಕು ಎಂದು ಹೇಳಿದರು.

ವಿಶ್ವ ಹಿಂದು ಪರಿಷತ್ ಉತ್ತರಕರ್ನಾಟಕ ಪ್ರಾಂತ ಕೋಶಾಧ್ಯಕ್ಷ ಕೃಷ್ಣ ಭಟ್ ಮಾತನಾಡಿ, ಜೂ.17ರಂದು ಮತಾಂತರ ನಿಷೇಧ ಕಾಯ್ದೆ ಹಿಂಪಡೆಯುವ ಸರ್ಕಾರದ ನಿರ್ಧಾರ ಖಂಡಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಲು ಆಗಮಿಸುತ್ತಿದ್ದ ಶಿವಾಪುರದ ಮುಪ್ಪಿನ ಕಾಡಸಿದ್ದೇಶ್ವರ ಮಠದ ಸ್ವಾಮೀಜಿ ಅವರ ಕಾರು ಕಾಕತಿ ಬಳಿ ಅಪಘಾತಕ್ಕೆ ಒಳಗಾಗಿ, ಇಬ್ಬರು ಸಾವನ್ನಪ್ಪಿ, ಸ್ವಾಮೀಜಿ ಕೂಡ ತೀವ್ರವಾಗಿ ಗಾಯಗೊಂಡಿದ್ದರು. ಗೋವುಗಳ ರಕ್ಷಣೆ ಮಾಡುವ ಸ್ವಾಮೀಜಿಗೆ ಅಪಘಾತವಾದರೂ ಅವರಿಗೆ ಪರಿಹಾರ ಕೊಡಲು ಸರ್ಕಾರ ಮನಸ್ಸು ಮಾಡುತ್ತಿಲ್ಲ. ಆದ್ದರಿಂದ ಪ್ರತಿಯೊಬ್ಬ ಹಿಂದು 11 ರೂ.ಜಮಾ ಮಾಡಿ ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ಕೊಡೋಣ ಎಂದರು.

ಸುದ್ದಿಗೋಷ್ಠಿಯಲ್ಲಿ ಮುತ್ನಾಳ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಗಣಿಕೊಪ್ಪದ ಗಂಗಾಧರ ಸ್ವಾಮೀಜಿ, ಜಿಲ್ಲಾಧ್ಯಕ್ಷ ಶ್ರೀಕಾಂತ ಕದಂ, ಆನಂದ ಕರಲಿಂಗನವರ, ಪ್ರಮೋದಕುಮಾರ ವಕ್ಕುಂದಮಠ, ವಿನೋದ ದೊಡ್ಡಣ್ಣವರ, ರವಿರಾಜ ಪಾಟೀಲ, ಪ್ರವೀಣ ಕೋಡಾ ಮತ್ತಿತರರಿದ್ದರು.

ಕುತಂತ್ರದ ಸಂಶಯ!: ಚಿಕ್ಕೋಡಿ ತಾಲೂಕಿನ ಹಿರೇಕೋಡಿಯ ಜೈನ ಮುನಿ ಕಾಮಕುಮಾರ ನಂದಿ ಮಹಾರಾಜರನ್ನು ಬರ್ಬರವಾಗಿ ಹತ್ಯೆ ಮಾಡಿದ್ದು, ಖಂಡನೀಯ. ಸಮಗ್ರ ತನಿಖೆ ನಡೆಸಿ ಪ್ರಕರಣದ ಸತ್ಯಾಸತ್ಯತೆ ಬಯಲಿಗೆ ತರಬೇಕು. ಹಣಕಾಸಿನ ವಿಚಾರದಲ್ಲಿ ಮುನಿಗಳ ಹತ್ಯೆ ಆಗಲು ಸಾಧ್ಯವೇ ಇಲ್ಲ. ನಿರ್ವಾಣ ಮುನಿಗಳು ಕೈಯಲ್ಲಿ ದುಡ್ಡು ಹಿಡಿಯುವುದೇ ಇಲ್ಲ. ಇದು ವೈಚಾರಿಕ ಹತ್ಯೆಯಾಗಿದ್ದು, ವಿದೇಶಿ ಕುತಂತ್ರದ ಸಂಶಯ ಮೂಡಿದೆ.

ಜಿಹಾದಿಗಳು ಯಾವ ರೀತಿ ಆಶ್ರಮಕ್ಕೆ ಬರುತ್ತಾರೆ ಗೊತ್ತಾಗಲ್ಲ. ಚಾಲಕರಾಗಿ, ಸೇವಕರಾಗಿಯೂ ಬರುವ ಸಾಧ್ಯತೆಯಿದೆ. ಹಾಗಾಗಿ ತನಿಖೆ ಅಡ್ಡದಾರಿ ಹಿಡಿಯಬಾರದು. ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ವಿಶ್ವ ಹಿಂದು ಪರಿಷತ್ ಉತ್ತರಕರ್ನಾಟಕ ಪ್ರಾಂತ ಕೋಶಾಧ್ಯಕ್ಷ ಕೃಷ್ಣ ಭಟ್ ಆಗ್ರಹಿಸಿದ್ದಾರೆ.

ಜೈನಮುನಿಗಳ ಕೊಲೆ ಖಂಡಿಸಿ ವಿಎಚ್‌ಪಿ ಪ್ರತಿಭಟನೆ: ಹಿರೇಕೋಡಿ ಜೈನ ಮುನಿ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಖಂಡಿಸಿ ನಗರದ ರಾಣಿ ಚನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗದಳ ಕಾರ್ಯಕರ್ತರು ಪ್ರತಿಭಟನಾ ರ‌್ಯಾಲಿ ನಡೆಸಿ ಸಮಗ್ರ ತನಿಖೆಗೆ ಒತ್ತಾಯಿಸಿದರು. ಹಣಕಾಸಿನ ವಿಚಾರಕ್ಕೆ ಮುನಿಗಳ ಹತ್ಯೆಯಾಗಿದೆ ಎಂಬ ಸಂಗತಿ ಒಪ್ಪಲು ಸಾಧ್ಯವಿಲ್ಲ. ಹಣಕಾಸಿನ ವ್ಯವಹಾರವಾಗಿದ್ದರೆ ಈ ರೀತಿ ಅಪಹರಿಸಲು, ಬರ್ಬರವಾಗಿ ತುಂಡರಿಸಲು ಸಾಧ್ಯವೇ? ನಿಜವಾದ ಅಪರಾಧಿಯನ್ನು ಕಾಪಾಡುವ ಷಡ್ಯಂತ್ರ ನಡೆದಿದ್ದು, ಸಿಬಿಐ ಮೂಲಕ ತನಿಖೆ ನಡೆಸಿ ಸತ್ಯಾಸತ್ಯತೆ ಹೊರತರಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net