

ಮಂಡ್ಯ: ದೆಹಲಿಯಲ್ಲಿ ಕನ್ನಡ ಸಂಘವು ಅಮೃತ ಮಹೋತ್ಸವ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಅ.15 ಮತ್ತು 16ರಂದು ಮಂಡ್ಯ ದಿವಸ ಆಚರಿಸುತ್ತಿದೆ. ಈ ಕಾರ್ಯಕ್ರಮದಲ್ಲಿ ಮಂಡ್ಯದ ಕರ್ನಾಟಕ ಸಂಘದ ಎರಡು ತಂಡಗಳು ಪಾಲ್ಗೊಂಡು ನಾಟಕ ಮತ್ತು ಯಕ್ಷಗಾನ ಪ್ರದರ್ಶನ ನೀಡಲಿದೆ ಎಂದು ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ಮಾಹಿತಿ ನೀಡಿದರು.
ಒಟ್ಟು 114 ಜನರ ತಂಡವು ದೆಹಲಿಗೆ ಹೋಗುತ್ತಿದೆ. ಕರ್ನಾಟಕ ಸಂಘವು ತಯಾರು ಮಾಡಿರುವ ಸದ್ವಿದ್ಯಾ ಶಾಲೆಯ ಮಕ್ಕಳ ತಂಡವು ಕುವೆಂಪು ರಚನೆಯ ಸ್ಮಶಾನ ಕುರುಕ್ಷೇತ್ರ ನಾಟಕ ಮತ್ತು ಹನಕೆರೆ ವಿವೇಕಾ ವಿದ್ಯಾಸಂಸ್ಥೆಯ ಮಕ್ಕಳು ಮೂಡಲಪಾಯ ಯಕ್ಷಗಾನದ ದೇವಿ ಮಹಾತ್ಮೆ ಪ್ರಸಂಗವನ್ನು ಪ್ರದರ್ಶಿಸಲಿದ್ದಾರೆ. ಅ.12ರಂದು ಮಂಡ್ಯ ನಗರದಿಂದ ಹೊರಡುವ ತಂಡ 20ರಂದು ವಾಪಾಸಾಗಲಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ಇನ್ನು ಸೆ.18ರಂದು ಕರ್ನಾಟಕ ಸಂಘದಲ್ಲಿ 2021-22ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಸೆ.18ರಂದು ಕರೆಯಲಾಗಿದೆ. ತಾಲೂಕು ಘಟಕಗಳ ರಚನೆ ಸಂಬಂಧ ಸಭೆಯಲ್ಲಿ ಮಹತ್ವದ ತೀರ್ಮಾನ ತೆಗೆದುಕೊಳ್ಳುವ ಬಗ್ಗೆ ಚರ್ಚಿಸಲಾಗುವುದು. ಅಂದು ಸಂಜೆ 4ಕ್ಕೆ ತಮ್ಮದೇ ಅಧ್ಯಕ್ಷತೆಯಲ್ಲಿ ಸಭೆ ಆರಂಭಗೊಳ್ಳಲಿದೆ. ಸಂಘದ ಎಲ್ಲ ಸದಸ್ಯರು ತಪ್ಪದೇ ಸಭೆಯಲ್ಲಿ ಪಾಲ್ಗೊಂಡು ಸಲಹೆ ಸೂಚನೆ ನೀಡಬೇಕು. ಸಭೆಗೆ ಬರುವವರು ಕೋವಿಡ್ ಮುನ್ಸೂಚನಾ ಕ್ರಮಗಳನ್ನು ಅನುಸರಿಸಬೇಕೆಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಮನವಿ ಮಾಡಿದರು.
ಪ್ರಧಾನ ಕಾರ್ಯದರ್ಶಿ ಎಂ.ಕೆ.ಹರೀಶ್‌ಕುಮಾರ್, ಕಾರ್ಯದರ್ಶಿಗಳಾದ ಚಂದಗಾಲು ಲೋಕೇಶ್, ಎಚ್.ಡಿ.ಸೋಮಶೇಖರ್, ಖಜಾಂಚಿ ಮಂಜುಳಾ ಉದಯಶಂಕರ್, ನಿರ್ದೇಶಕ ನಾಗಪ್ಪ ಹನಕೆರೆ, ಮದನ್ ಹಾಜರಿದ್ದರು.