ಎಷ್ಟೇ ಕಷ್ಟ ಎದುರಾದರೂ ಕುಗ್ಗಬಾರದು: ಚುಂಚಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಕಿವಿಮಾತು

(Karnataka Sanga)
Published on

ಮಂಡ್ಯ: ಬದುಕು, ಭಾವನೆಗಳು ಸೂಕ್ಷ್ಮವಾಗಿರಬೇಕು. ಎಷ್ಟೇ ಕಷ್ಟ ಬಂದರೂ ಕುಗ್ಗದೇ ಸಂತೋಷ ಬಂದಾಗ ಹಿಗ್ಗದೇ ಮುನ್ನಡೆಯಬೇಕು ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಕಿವಿಮಾತು ಹೇಳಿದರು.

ನಗರದ ಕರ್ನಾಟಕ ಸಂಘದ ಆವರಣದಲ್ಲಿ 5 ಕೋಟಿ ರೂ ವೆಚ್ಚದ ರಂಗಮಂದಿರ ನಿರ್ಮಾಣ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಆಧ್ಯಾತ್ಮಿಕ ಶಕ್ತ ಜತೆಗಿದ್ದರೆ ಸೊನ್ನೆಗೂ ಕೂಡ ಗೌರವ ಸಿಗುತ್ತದೆ. ಸೊನ್ನೆ ಮತ್ತು ದೇವರ ನಡುವೆ ಜಗತ್ತು ನಿಂತಿದೆ ಎಂಬುದನ್ನು ಮರೆಯಬಾರದು. ಎಲ್ಲ ಕಡೆಯೂ ಪರಮಾತ್ಮನ ವಾಸಸ್ಥಾನವಿದೆ. ಜೇನು ನೊಣಕ್ಕೂ ಕೂಡ ಮನೆ ಕಟ್ಟುವ ಆಸೆಯಿರುತ್ತದೆ. ಜೇನುತುಪ್ಪ ಸಂಗ್ರಹಿಸಿ ಅದನ್ನು ನೈವೇದ್ಯಕ್ಕೆಂದು ದೇವರ ಮೂರ್ತಿಗೆ ಬಳಸಲಾಗುತ್ತದೆ. ಅದೇ ರೀತಿ ಈ ಭವನ ನಿರ್ಮಾಣದಿಂದ ಸಂಸ್ಕೃತಿ ನೆಲಗಟ್ಟಿನಲ್ಲಿ ಕಾರ್ಯಕ್ರಮಕ್ಕೆ ಹೆಚ್ಚು ಅನುಕೂಲವಾಗಿ ನೆರವಾಗಲಿ ಎಂದು ಹಾರೈಸಿದರು.

ಬಸವಣ್ಣನವರ ಕಾಯಕವೇ ಕೈಲಾಸ ಇಂದಿಗು ಪ್ರಸ್ತುತವಾಗಿದೆ. ಮಾಡುವ ಎಲ್ಲ ಕಾರ್ಯಗಳು ಪರಮಾತ್ಮನ ಪೂಜೆಯಂತಿರಬೇಕು. ಗೋಧೂಳಿ ಮಧ್ಯದಲ್ಲಿ ಹಾಗೂ ವರ್ಷಧಾರೆ ಸನ್ನಿವೇಶದಲ್ಲಿ ಈ ಪವಿತ್ರ ಕಾರ್ಯಕ್ರಮವಾದ ಭೂಮಿ ಪೂಜೆ ನೆರವೇರಿಸಲಾಗಿದೆ. ಕಾಯಕವೇ ಕೈಲಾಸವೆಂದು ಬಸವಣ್ಣನವರು ಹೇಳಿದ್ದರು. ನಿಸ್ವಾರ್ಥ ಕಾಯಕವು ದೇವರಿಗೆ ಇಷ್ಟವಾಗುತ್ತದೆ. ಮಂಡ್ಯ ಎಂದಾಕ್ಷಣ ಜನರು ಒರಟು ಎನ್ನುತ್ತಾರೆ. ಆದರೆ ಮತ್ತೊಂದು ಭಾಗದಲ್ಲಿ ನೋಡುವುದಾದರೆ ಉತ್ತಮರಾಗಿಯೇ ಕಾಣುತ್ತಾರೆ ಎಂದು ಬಣ್ಣಿಸಿದರು.

ಕರ್ನಾಟಕ ಸಂಘವು ಹಲವು ವರ್ಷಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ವ್ಯಕ್ತಿಯ ಬದುಕನ್ನ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಧಾರ್ಮಿಕವಾಗಿ ಬದುಕು ಕಟ್ಟುವ ಕೆಲಸವನ್ನ ಮಾಡುತ್ತಿದೆ. ಇದಕ್ಕೆ ಪೂರಕವಾಗಿ ಇನ್ನೊಂದು ಹೆಜ್ಜೆ ಮುಂದಿಟ್ಟು ರಂಗಮಂದಿರ ಕಟ್ಟುವ ಕೆಲಸಕ್ಕೆ ಮುಂದಾಗಿರುವುದು ಸಂತೋಷ ತಂದಿದೆ. ಕರ್ನಾಟಕ ಸಂಘ ಹೊಸ ಆಯಾಮವನ್ನು ತಂದುಕೊಟ್ಟಿದೆ. ವರ್ಷಪೂರ್ತಿ ಕನ್ನಡ ಪರವಾದ ಕಾರ್ಯಕ್ರಮಗಳು ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಶಾಸಕ ಎಂ.ಶ್ರೀನಿವಾಸ್, ಮಾಜಿ ಎಂಎಲ್‌ಸಿಗಳಾದ ಕೆ.ಟಿ.ಶ್ರೀಕಂಠೇಗೌಡ, ಬಿ.ರಾಮಕೃಷ್ಣ, ಸಾಹಿತಿಗಳಾದ ಡಾ.ಮುದ್ದೇಗೌಡ, ಡಾ.ರಾಗೌ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜಯರಾಂ ರಾಯಪುರ, ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net