

ಹುಬ್ಬಳ್ಳಿ : ಕಳೆದ 2022ರ ಮುಂಗಾರಿನ ಬೆಳೆ ಕಟಾವು ಪ್ರಯೋಗಗಳ ವರದಿಗಳು ಅವಾಸ್ತವ ಹಾಗೂ ಅವೈಜ್ಞಾನಿಕತೆಯಿಂದ ಕೂಡಿವೆ. ಅತಿವೃಷ್ಠಿಯಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಬೆಳೆ ವಿಮೆ ಮಾಡಿಸಿರುವ ಧಾರವಾಡ ಜಿಲ್ಲೆಯ ರೈತರಿಗೆ ಕೆಆರ್ಎಸ್ಪಿಎಂಎಫ್ಬಿವೈ (ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ) ಅಡಿ ಕೂಡಲೇ ಉಳಿದ ವಿಮಾ ಹಣವನ್ನು ಇತ್ಯರ್ಥ ಪಡಿಸಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ಈ ಕುರಿತು ತಮ್ಮ ಪತ್ರದಲ್ಲಿ ವಿವರಿಸಿರುವ ಸಚಿವ ಜೋಶಿ, ಸಂಪೂರ್ಣ ಜಿಲ್ಲೆಯಲ್ಲಿಯೇ 2022ರ ಮುಂಗಾರು ಹಂಗಾಮಿನಲ್ಲಿ ಅತಿ ಹೆಚ್ಚಿನ ಮಳೆಯಿಂದಾಗಿ ರಾಜ್ಯ ಸರ್ಕಾರವು ನೆರೆಪಿಡಿತ ಪ್ರದೇಶವೆಂದು ಘೊಷಿಸಿದ್ದಲ್ಲದೆ ಬೆಳೆಹಾನಿ ಪರಿಹಾರ ನೀಡಿದೆ. ಜತೆಗೆ ಮಧ್ಯಂತರ ಬೆಳೆ ವಿಮಾ ಪರಿಹಾರವನ್ನು ನೀಡಿದೆ. ಈ ಎಲ್ಲ ಅಂಶಗಳ ನಡುವೆ ಉತ್ತಮವಾಗಿ ಇಳುವರಿ ಬಂದಿವೆ ಎಂದು ತಮ್ಮ ಬೆಳೆ ಸಮೀಕ್ಷೆ ಕೈಗೊಂಡ ಇಲಾಖೆಗಳು ವರದಿ ನೀಡಿವೆೆ. ಈ ರೀತಿ ದ್ವಂದ್ವ ವರದಿಗಳನ್ನು ಸರ್ಕಾರ ಹೇಗೆ ಸ್ವೀಕರಿಸಿತು? ಎಂದು ಪ್ರಶ್ನಿಸಿದ್ದಾರೆ.
ಜಿಲ್ಲಾಡಳಿತ ಹಾಗೂ ಸಂಭಂಧಿಸಿದ ಇಲಾಖೆಗಳ ಸಿಬ್ಬಂದಿ ಸ್ಥಾನಿಕ ಪರಿಶೀಲನೆ ಹಾಗೂ ಪಂಚನಾಮೆಯನ್ನು ಬೆಳೆಗಳು ಹಾಳಾದ ಹೊಲಗಳಿಗೆ ತೆರಳಿ ಪ್ರತ್ಯಕ್ಷ ಪರಿಕ್ಷೆ ನಡೆಸಿ, ತಾಲೂಕಾಡಳಿತ ಹಾಗೂ ಜಿಲ್ಲಾಡಳಿತಕ್ಕೆ ವರದಿ ನೀಡಿದ್ದಾರೆ. ಅದರಂತೆ ಬೆಳೆ ಹಾನಿಗೆ ಒಳಗಾದ ಜಿಲ್ಲೆಯ ಒಟ್ಟು 1,64,154 ಹೆಕ್ಟರ್ ಪ್ರದೇಶವಾರು ವರದಿ ಪ್ರಕಾರ 1,18,371 ರೈತರಿಗೆ 211 ಕೋಟಿ ರೂ. ಪರಿಹಾರ ನೀಡಲಾಗಿದೆ ಎಂದು ತಿಳಿಸಿದ್ದಾರೆ.
2022 ರ ಮುಂಗಾರು ಹಂಗಾಮಿನಲ್ಲಿ ಬಿದ್ದ ಮಳೆ ಪ್ರಮಾಣ 477.10 ಮಿಮೀ ಇದ್ದಾಗ ಜಿಲ್ಲೆಯ ಬಹುತೇಕ ಎಲ್ಲ ಬೆಳೆಗಳಿಗೆ ಹೆಚ್ಚಿನ ವಿಮಾ ಪರಿಹಾರ ದೊರಕಿದ್ದು, 2022 ರಲ್ಲಿ ಅತಿ ಹೆಚ್ಚು ಅಂದರೆ 569.4 ಮಿ.ಮಿ. ಮಳೆಯಾದಾಗ ಬೆಳೆ ಇಳುವರಿಯನ್ನು 22ನೇ ಮುಂಗಾರಿನಲ್ಲಿ ಹೆಚ್ಚು ಇಳುವರಿಯ ವರದಿ ಮಾಡಿ, ಬೆಳೆವಿಮೆ ಪರಿಹಾರ ಬರದಂತೆ ಮಾಡಿದ್ದಾರೆ. ಇದು ಹೇಗೆ ಸಾಧ್ಯ ಎಂಬುದು ಯಕ್ಷಪ್ರಶ್ನೆಯಾಗಿದೆ ಎಂದು ಪತ್ರದಲ್ಲಿ ದೂರಿದ್ದಾರೆ.
ಈ ಸಂಗತಿಗಳನ್ನು ಗಮನಿಸಿದರೆ ಅಧಿಕಾರಿಗಳು ಮಳೆಯಿಂದ ಬೆಳೆ ಹಾನಿಗೊಳಗಾಗಿದೆ ಎಂದು ಪರಿಹಾರಕ್ಕಾಗಿ ವರದಿ ನೀಡಿ, ಪರಿಹಾರವನ್ನು ದೊರಕಿಸಿದ್ದಾರೆ. ಆದರೆ, ಅದೇ ಸಮಯದಲ್ಲಿ ಬೆಳೆ ಸಮೀಕ್ಷೆಯನ್ನು ಇದೆ ಅದಿಕಾರಿಗಳು ನಡೆಸಿ, ಬೆಳೆ ಹಾಳಾಗಿದ್ದರೂ ಉತ್ತಮ ಇಳುವರಿ ಬಂದಿದೆ ಎಂದು ವರದಿ ಮಾಡಿದ್ದಾರೆ. ಇದನ್ನು ಗಮನಿಸಿದರೆ ಸಂಪೂರ್ಣ ವ್ಯವಸ್ಥೆಯನ್ನು ಬುಡಮೇಲು ಮಾಡಿರುವುದು ಕಂಡುಬರುತ್ತದೆ ಎಂದು ಸಚಿವ ಜೋಶಿ ಶಂಕೆ ವ್ಯಕ್ತಪಡಿಸಿದ್ದಾರೆ.
ಕೆಲವು ಅಧಿಕಾರಿಗಳು ಬೆಳೆವಿಮಾ ಕಂಪನಿಯೊಂದಿಗೆ ಶಾಮಿಲಾಗಿ ಕಂಪನಿಗೆೆ ಲಾಭ ಮಾಡುವ ಉದ್ದೇಶದಿಂದಲೇ ಈ ರೀತಿ ವರದಿ ನೀಡಿರುವರೆಂಬುದು ಸಂಶಯಕ್ಕೆ ಕಾರಣವಾಗಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿ ಸಮಗ್ರ ತನಿಖೆೆಗೆ ಒಳಪಡಿಸಬೇಕು. ತಪ್ಪಿತಸ್ತರ ವಿರುದ್ದ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.
ಅಧಿಕಾರಿಗಳ ತಪ್ಪಿನಿಂದ ಅನ್ಯಾಯಕ್ಕೆ ಒಳಗಾದ ರೈತರಿಗೆ ನ್ಯಾಯ ಒದಗಿಸಬೇಕು. ಬೆಳೆ ಸಮಿಕ್ಷೇಯ ವರದಿಗಳನ್ನು ಪುನರ್ ಪರಿಶೀಲಿಸಿ, ಈಗಾಗಲೇ ಶೇ. 25 ವಿಮಾ ಪರಿಹಾರ ನೀಡಿರುವ ರೈತರಿಗೆ ಕೂಡಲೇ ಸಂಪೂರ್ಣ ಬೆಳೆ ವಿಮೆ ಪರಿಹಾರ ಒದಗಿಸುವಂತೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆಗ್ರಹಿಸಿದ್ದಾರೆ.