ಈ ಬಾರಿ ಹಿಂಗಾರು ಜೋರು

HUNNIME
ನರೇಗಲ್ಲನ ಸಂತೆ ಬಜಾರದ ಗಣೇಶ ದೇವಸ್ಥಾನದ ಹತ್ತಿರ ಭಾನುವಾರ ಸಂಜೆ ಕಾರ ಹುಣ್ಣಿಮೆ ನಿಮಿತ್ತ ಎತ್ತು ಕರಿ ಹರಿದವು.
Published on

ನರೇಗಲ್ಲ: ಕಾರ ಹುಣ್ಣಿಮೆ ಅಂಗವಾಗಿ ರೈತರು ಶುಕ್ರವಾರ ಕರಿ ಹರಿಯುವ ಸಂಪ್ರದಾಯ ಆಚರಿಸಿ ಸಂಭ್ರಮಿಸಿದರು. ಕಂದು ಬಣ್ಣದ ಎತ್ತು ಕರಿ ಹರಿದರೆ ಮುಂಗಾರು ಜೋರು, ಬಿಳಿ ಎತ್ತು ಕರಿ ಹರಿದರೆ ಹಿಂಗಾರು ಜೋರು ಎನ್ನುವ ನಂಬಿಕೆ ಈ ಭಾಗದ ರೈತರಲ್ಲಿದೆ. ಪಟ್ಟಣದ ಅಗಸಿಬಾಗಿಲು ಸಂತೆ ಬಜಾರ ಹತ್ತಿರ ಈ ಬಾರಿ ಈರಪ್ಪ ಹೊಸಮನಿ (ಹುನಗುಂದ) ಅವರ ಬಿಳಿ ಹೋರಿ ಕರಿ ಹರಿಯುವ ಮೂಲಕ ಹಿಂಗಾರು ಭರ್ಜರಿಯಾಗಿರಲಿದೆ ಎನ್ನುವ ಭರವಸೆ ಮೂಡಿಸಿತು.

ಬೇಸಿಗೆ ಮುಗಿದು ಮುಂಗಾರು ಆರಂಭವಾಗುತ್ತಿದ್ದಂತೆ ಬರುವ ರೈತರ ಮೊದಲ ಹಬ್ಬವೇ ಕಾರ ಹುಣ್ಣಿಮೆ. ಕಾರ ಹುಣ್ಣಿಮೆ ಹಬ್ಬ ಆಚರಿಸಿ ರೈತರು ಉಳುಮೆಗಾಗಿ ಎತ್ತುಗಳನ್ನು ಗಳೆ ಕಟ್ಟುತ್ತಾರೆ. ದೇಶಕ್ಕೆ ರೈತ ಬೆನ್ನೆಲುಬಾದರೆ ರೈತನಿಗೆ ಎತ್ತುಗಳೇ ಬೆನ್ನೆಲುಬಾಗಿದ್ದು, ಅವುಗಳನ್ನು ಸಿಂಗರಿಸಿ ಊರೆಲ್ಲ ಮೆರವಣಿಗೆ ಮಾಡುವುದು ರೈತನಿಗೆ ಹೆಮ್ಮೆಯ ಸಂಗತಿ.

ಕಾರ ಹುಣ್ಣಿಮೆ ಅಂಗವಾಗಿ ಪಟ್ಟಣದಲ್ಲಿ ಶುಕ್ರವಾರ ರೈತರು ಎತ್ತುಗಳಿಗೆ ವಿವಿಧ ಬಣ್ಣಗಳ ಅಲಂಕಾರ, ಗೊಂಡೆ, ಮಘಡಾ, ಮೂಗುದಾರ, ಗೆಜ್ಜೆ, ಜೂಲಾ, ಬಾಸಿಂಗ ಸೇರಿದಂತೆ ಹಲವಾರು ವಸ್ತುಗಳಿಂದ ಸಿಂಗರಿಸಿ ಸಂಭ್ರಮಿಸಿದರು.

ರೈತ ಸಮುದಾಯದ ವತಿಯಿಂದ ಗ್ರಾಮ ದೇವರಿಗೆ ಪೂಜೆ ಸಲ್ಲಿಸಲಾಯಿತು. ನಂತರ ಎತ್ತುಗಳಿಗೆ ಪೂಜೆ, ಆರತಿ ಬೆಳಗಿ ಪಟ್ಟಣದಲ್ಲಿ ಪ್ರವೇಶ ಮಾಡಿಕೊಳ್ಳಲಾಯಿತು. ಕರಿ ಹರಿಯುವ ಸಂಪ್ರದಾಯಿಕ ನೆರವೇರಿಸಲಾಯಿತು.

ಕರಿ ಹರಿದು ವಿಜಯಶಾಲಿಯಾದ ಬಿಳಿ ಎತ್ತಿಗೆ ಓಂ ಶಿಕ್ಷಣ ಸಂಸ್ಥೆಯ ವತಿಯಿಂದ ನಗದು ಬಹುಮಾನ ವಿತರಿಸಲಾಯಿತು. ಅಶೋಕ ಬೇವಿನಕಟ್ಟಿ, ಶಿವನಗೌಡ ಪಾಟೀಲ, ಕಳಕನಗೌಡ ಲಕ್ಕನಗೌಡ್ರ, ಬಸವರಾಜ ಜೋಳದ, ಯಲ್ಲಪ್ಪ ಜುಟ್ಲ, ಶಶಿದರ ಓದುಸಮಠ, ಮಂಜುನಾಥ ಮ್ಯಾಗಿನಮನಿ, ಕಳಕನಗೌಡ ಪೊಲೀಸ್‌ಪಾಟೀಲ, ಚೇತನ ಮ್ಯಾಗೇರಿ, ಅಲ್ಲಾಭಕ್ಷಿ ನದಾಫ್, ಶರಣಪ್ಪ ಕಲಾಲಬಂಡಿ, ಕಲ್ಮೇಶ ತೊಂಡಿಹಾಳ, ಚಂದ್ರು ಲಕ್ಕನಗೌಡ್ರ, ಸಚಿನ ಹಂಜಿ, ಸಂಗಮೇಶ ದಿಂಡೂರ, ಆನಂದ ಹೊನವಾಡ, ಜಗದೀಶ ಹೊನವಾಡ, ಕಲ್ಲಪ್ಪ ಕಡೇತೋಟದ, ಸರಣಪ್ಪ ಬೆಟಗೇರಿ, ಮೈಲಾರಪ್ಪ ಗೋಡಿ, ಶರಣಪ್ಪ ಕಳಕಣ್ಣವರ, ಶೇಕಪ್ಪ ಲಕ್ಕನಗೌಡ್ರ, ಶರಣಪ್ಪ ಕುಷ್ಟಗಿ, ನಿಂಗಪ್ಪ ಗುರಿಕಾರ ಸೇರಿದಂತೆ ರೈತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net