

ಸವಣೂರ: ಸುಕ್ಷೇತ್ರ ಕಾರಡಗಿ ಗ್ರಾಮದ ಶ್ರೀ ವೀರಭದ್ರೇಶ್ವರ ದೇವರ ಜಾತ್ರಾ ಮಹೋತ್ಸವದ ಅಂಗವಾಗಿ ಏ. 11ರಿಂದ 13ರ ವರೆಗೆ ವಿವಿಧ ಧಾರ್ವಿುಕ ಕೈಂಕರ್ಯ ಹಾಗೂ ರಥೋತ್ಸವ ಜರುಗಲಿದೆ ಎಂದು ಕಾರಡಗಿ ಶ್ರೀ ವೀರಭದ್ರೇಶ್ವರ ದೇವಸ್ಥಾನ ಆಡಳಿತ ಮಂಡಳಿ ಕಾರ್ಯದರ್ಶಿ ರಾಘವೇಂದ್ರಗೌಡ ಪಾಟೀಲ ತಿಳಿಸಿದರು.
ಕಾರಡಗಿ ಗ್ರಾಮದ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಸಭಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏ. 11ರಂದು ಸಂಜೆ 5 ಗಂಟೆಗೆ ಶ್ರೀ ವೀರಭದ್ರೇಶ್ವರ ಉತ್ಸವ ಮೂರ್ತಿ ಮೆರವಣಿಗೆ ಹಾಗೂ ಮಹಾಗಣಾರಾಧನೆ ಜರುಗಲಿದೆ. 12ರಂದು ಬೆಳಗ್ಗೆ ಗುಗ್ಗಳ, 8.30ಕ್ಕೆ ಸವಣೂರಿನಿಂದ ಗುಗ್ಗಳ ಸಮೇತ ಪಾದಯಾತ್ರೆ ಮೂಲಕ ಶ್ರೀಕ್ಷೇತ್ರಕ್ಕೆ ಆಗಮಿಸುವ ಸದ್ಭಕ್ತರನ್ನು ಸ್ವಾಗತಿಸುವ ಕಾರ್ಯಕ್ರಮ ಜರುಗುವುದು. ಸಂಜೆ 5 ಗಂಟೆಗೆ ಮಂತ್ರೋಡಿ ಹಿರೇಮಠದ ಶ್ರೀ ಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಹೂವಿನಶಿಗ್ಲಿ ವಿರಕ್ತಮಠದ ಶ್ರೀ ಚನ್ನವೀರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಶ್ರೀ ವೀರಭದ್ರೇಶ್ವರ ರಥೋತ್ಸವ ಜರುಗುವುದು. ಸಂಜೆ 6.30ಕ್ಕೆ ದೇವಸ್ಥಾನ ಆವರಣದಲ್ಲಿ ಧರ್ಮಸಭೆ ಏರ್ಪಡಿಸಲಾಗಿದೆ.
ಮಂತ್ರೋಡಿ ಹಿರೇಮಠದ ಶ್ರೀ ಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಹೂವಿನಶಿಗ್ಲಿ ವಿರಕ್ತಮಠದ ಶ್ರೀ ಚನ್ನವೀರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಉದ್ಘಾಟಿಸುವರು. ಶ್ರೀ ವೀರಭದ್ರೇಶ್ವರ ಟ್ರಸ್ಟ್ ಕಮಿಟಿ ಅಧ್ಯಕ್ಷ ಬಸನಗೌಡ ಪಾಟೀಲ ಅಧ್ಯಕ್ಷತೆ ವಹಿಸುವರು. ಟ್ರಸ್ಟ್ ಕಮಿಟಿ ಪದಾಧಿಕಾರಿಗಳು, ಸದಸ್ಯರು, ಇತರರು ಪಾಲ್ಗೊಳ್ಳುವರು. ರಾತ್ರಿ 9.30ಕ್ಕೆ ಶ್ರೀ ಬಸವ ಕಲಾಲೋಕ ದಾವಣಗೆರೆ ತಂಡದಿಂದ ಜಗಜ್ಯೋತಿ ಬಸವೇಶ್ವರ ಐತಿಹಾಸಿಕ ನಾಟಕ ಪ್ರದರ್ಶನ ಜರುಗುವುದು ಎಂದರು.
ಏ. 13ರಂದು ಬೆಳಗ್ಗೆ ವಿವಿಧ ಧಾರ್ವಿುಕ ಕೈಂಕರ್ಯ ಜರುಗುವುವು. ಸಂಜೆ ಕಡುಬಿನ ಕಾಳಗ ಜರುಗಲಿದೆ. ವಿವಿಧ ಜಿಲ್ಲೆಗಳಿಂದ ಆಗಮಿಸುವ ಭಕ್ತರಿಗೆ ಬಸ್ ಸೌಕರ್ಯ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ವಸತಿ ವ್ಯವಸ್ಥೆಯೊಂದಿಗೆ ನಿತ್ಯ ನಿರಂತರ ದಾಸೋಹ ಸೇವೆ ಕೈಗೊಳ್ಳಲಾಗುತ್ತಿದೆ ಎಂದರು.
ಹಲವು ಅಭಿವೃದ್ಧಿ ಕಾರ್ಯ: ಭಕ್ತರ ಸಹಕಾರದಿದ ಶ್ರೀಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾರ್ಯ ಆರಂಭಿಸಲಾಗಿದೆ. ಭಕ್ತರ ವಸತಿಗೆ ಕಟ್ಟಡ ನಿರ್ವಣ, ನಿತ್ಯ ದಾಸೋಹ, ಬೆಳ್ಳಿ ರಥ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿಗಾಗಿ ಭಕ್ತರ ಸಹಾಯ-ಸಹಕಾರ ನಿರೀಕ್ಷಿಸಲಾಗುತ್ತಿದೆ. ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಅವರ ವಿಶೇಷ ಕಾಳಜಿಯಿಂದಾಗಿ ಶ್ರೀಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಆರಂಭಗೊಂಡಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಜಾತ್ರಾ ಮಹೋತ್ಸವ, ರಥೋತ್ಸವ ಹಾಗೂ ಸಮಾರಂಭದಲ್ಲಿ ಪಾಲ್ಗೊಳ್ಳಬೇಕು ಎಂದರು.
ಕಾರಡಗಿ ಶ್ರೀ ವೀರಭದ್ರೇಶ್ವರ ಟ್ರಸ್ಟ್ ಕಮಿಟಿ ಅಧ್ಯಕ್ಷ ಬಸನಗೌಡ ಪಾಟೀಲ, ಪದಾಧಿಕಾರಿಗಳಾದ ಗುರುಪಾದಪ್ಪ ಶಿರೂರ, ಲವಪ್ಪ ಕುರವತ್ತಿ, ರೇವಣಸಿದ್ದಪ್ಪ ಕಾಳಶೆಟ್ಟಿ, ಕಲ್ಲಪ್ಪ ಆಜೂರ, ವಿ.ಸಿ. ಪಾಟೀಲ, ವೆಂಕಟರಾವ್ ಕುಲಕರ್ಣಿ, ವೀರಪ್ಪ ತೊಂಡೂರ, ಮಹೇಶ ಮುದಗಲ್, ಶಂಕ್ರಪ್ಪ ಅಗಸಿಬಾಗಿಲ, ಬಸಟೆಪ್ಪ ಅತ್ತಿಗೇರಿ, ಶಿವಕುಮಾರ ಸೊರಟೂರ ಇತರರು ಇದ್ದರು.