ತಾಯಿ-ಮಕ್ಕಳ ಆಸ್ಪತ್ರೆ ಕಾಮಗಾರಿ ಶೀಘ್ರ ಶುರು

ಹೈಕ ಶಿಕ್ಷಣ ಸಂಸ್ಥೆಯ ಪಿಡಿಎ ಕಾಲೇಜು ಸಭಾಂಗಣದಲ್ಲಿ ಹಮ್ಮಿಕೊಂಡಿರುವ ಮೂರು ದಿನದ ಕರ್ನಾಟಕ ರಾಜ್ಯ ಮಕ್ಕಳ ತಜ್ಞ ವೈದ್ಯರ ೪೨ನೇ ಸಮ್ಮೇಳನ (ಕರ್‌ಪೆಡಿಕಾನ್-೨೦೨೩)ಕ್ಕೆ ಶುಕ್ರವಾರ ಸಂಜೆ ಚಾಲನೆ ನೀಡಿದ ಅವರು, ಕರ್ನಾಟಕ ವೈದ್ಯಕೀಯ ಮತ್ತು ಆರೋಗ್ಯ ಕ್ಷೇತ್ರದಲ್ಲಿ ದೇಶದಲ್ಲೇ ಮೇರು ಸ್ಥಾನದಲ್ಲಿದೆ. ಐದು ವರ್ಷಗಳಲ್ಲಿ ಎರಡೂ ಕ್ಷೇತ್ರದಲ್ಲಿ ಮಹತ್ವದ ಸುಧಾರಣೆ ಮತ್ತು ಬದಲಾವಣೆ ತರುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗುತ್ತಿದೆ ಎಂದರು.
IMG-20231007-WA0022
Published on

ಮಕ್ಕಳ ತಜ್ಞ ವೈದ್ಯರ ರಾಜ್ಯ ಸಮ್ಮೇಳನ ಆರಂಭ | ಆರೋಗ್ಯ ಕ್ಷೇತ್ರದಲ್ಲಿ ಕರ್ನಾಟಕ ದೇಶದಲ್ಲಿ ಮೇರು : ಸಚಿವ ಪಾಟೀಲ್

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಜನರಿಗೆ ಕಡಿಮೆ ವೆಚ್ಚದಲ್ಲಿ ಹೈಟೆಕ್ ಮತ್ತು ಗುಣಮಟ್ಟದ ವೈದ್ಯಕೀಯ ಸೇವೆ ಮತ್ತು ಚಿಕಿತ್ಸೆ ಸಿಗುವಂತಾಗಲು ವೈದ್ಯರು ಪೂರಕ ಕ್ರಮ ಕೈಗೊಳ್ಳಬೇಕು. ಬಡವರಿಗೂ ಸರ್ಕಾರಿ ವಲಯದಲ್ಲಿ ಹೈಟೆಕ್ ಚಿಕಿತ್ಸೆ ಕೊಡಿಸುವುದು ನನ್ನ ಗುರಿಯಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಹೇಳಿದರು.
ಹೈಕ ಶಿಕ್ಷಣ ಸಂಸ್ಥೆಯ ಪಿಡಿಎ ಕಾಲೇಜು ಸಭಾಂಗಣದಲ್ಲಿ ಹಮ್ಮಿಕೊಂಡಿರುವ ಮೂರು ದಿನದ ಕರ್ನಾಟಕ ರಾಜ್ಯ ಮಕ್ಕಳ ತಜ್ಞ ವೈದ್ಯರ ೪೨ನೇ ಸಮ್ಮೇಳನ (ಕರ್‌ಪೆಡಿಕಾನ್-೨೦೨೩)ಕ್ಕೆ ಶುಕ್ರವಾರ ಸಂಜೆ ಚಾಲನೆ ನೀಡಿದ ಅವರು, ಕರ್ನಾಟಕ ವೈದ್ಯಕೀಯ ಮತ್ತು ಆರೋಗ್ಯ ಕ್ಷೇತ್ರದಲ್ಲಿ ದೇಶದಲ್ಲೇ ಮೇರು ಸ್ಥಾನದಲ್ಲಿದೆ. ಐದು ವರ್ಷಗಳಲ್ಲಿ ಎರಡೂ ಕ್ಷೇತ್ರದಲ್ಲಿ ಮಹತ್ವದ ಸುಧಾರಣೆ ಮತ್ತು ಬದಲಾವಣೆ ತರುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗುತ್ತಿದೆ ಎಂದರು.
ಕಲಬುರಗಿಗೆ ೩೦೦ ಹಾಸಿಗೆಗಳ ತಾಯಿ-ಮಕ್ಕಳ ಆಸ್ಪತ್ರೆ ಮಂಜೂರಾಗಿದೆ. ಮೊದಲ ಹಂತದಲ್ಲಿ ೧೨೦ ಕೋಟಿ ರೂ. ಸರ್ಕಾರ ಬಿಡುಗಡೆ ಮಾಡಿದ್ದು, ಎರಡ್ಮೂರು ತಿಂಗಳಲ್ಲಿ ನಿರ್ಮಾಣ ಕಾಮಗಾರಿ ಆರಂಭಿಸಲಾಗುವುದು. ಜಿಮ್ಸ್ ಆವರಣದಲ್ಲಿರುವ ಹಳೆಯ ಆಸ್ಪತ್ರೆ ನೆಲಸಮಗೊಳಿಸಿ ತಾಯಿ-ಮಕ್ಕಳ ಆಸ್ಪತ್ರೆ (ಎಂಸಿಎಚ್) ಕಟ್ಟಡ ನಿರ್ಮಿಸುವುದಾಗಿ ಹೇಳಿದರು.
ಬೆಳಗಾವಿ, ಕಲಬುರಗಿ ಮತ್ತು ಮೈಸೂರಿಗೆ ಸುಪರ್ ಸ್ಟೆಷಾಲಿಟಿ ಆಸ್ಪತ್ರೆಗಳನ್ನು ಮಂಜೂರು ಮಾಡಲಾಗಿದೆ. ಕಲಬುರಗಿಯಲ್ಲಿ ಎರಡ್ಮೂರು ತಿಂಗಳಲ್ಲಿ ಆರಂಭಿಸಲಾಗುವುದು. ಕಲಬುರಗಿಯ ಟ್ರಾಮಾ ಕೇರ್ ಸೆಂಟರ್ ತಿಂಗಳಲ್ಲಿ ಉದ್ಘಾಟಿಸಿ ಜನರ ಸೇವೆಗೆ ಅರ್ಪಿಸಲಾಗುವುದು ಎಂದು ಘೋಷಿಸಿದರು.
ಸರ್ಕಾರಿ ವಲಯದಲ್ಲಿ ದೊಡ್ಡ ಮತ್ತು ಹೈಟೆಕ್ ಆಸ್ಪತ್ರೆಗಳು ಶುರುವಾದರೆ ಖಾಸಗಿ ಕ್ಷೇತ್ರದಲ್ಲಿ ಪೈಪೋಟಿ ಶುರುವಾಗಿ ಕಡಿಮೆ ದರದಲ್ಲಿ ಜನರಿಗೆ ಆರೋಗ್ಯ ಸೇವೆ ಸಿಗಲಿದೆ. ಜಯದೇವ ಆಸ್ಪತ್ರೆ ಕಲಬುರಗಿಯಲ್ಲಿ ಶುರುವಾದ ಬಳಿಕ ಸಾಕಷ್ಟು ಬದಲಾವಣೆಯಾಗಿದೆ. ಈ ಭಾಗಕ್ಕೆ ಅದೊಂದು ದೊಡ್ಡ ಕೊಡುಗೆಯಾಗಿದ್ದು, ಜನವರಿಯಲ್ಲಿ ಲೋಕಾರ್ಪಣೆ ಮಾಡುವುದಾಗಿ ಹೇಳಿದರು.
ಕರ್ನಾಟಕ ರಾಜ್ಯ ಮಕ್ಕಳ ತಜ್ಞ ವೈದ್ಯರ ಸಂಘ ಹಾಗೂ ಸಮ್ಮೇಳನ ಸಂಘಟನಾ ಸಮಿತಿ ಅಧ್ಯಕ್ಷರಾದ ಡಾ.ಶರಣಗೌಡ ಪಾಟೀಲ್ ಪ್ರಾಸ್ತಾವಿಕ ಮಾತನಾಡಿ, ೧೮ ವರ್ಷ ಬಳಿಕ ನಗರದಲ್ಲಿ ಮಕ್ಕಳ ತಜ್ಞರ ಸಮ್ಮೇಳನ ನಡೆದಿದ್ದು, ಮಾದರಿಯಾಗಿ ಸಂಘಟಿಸಲಾಗಿದೆ. ಇದಕ್ಕೆ ಎಲ್ಲರ ಸಹಕಾರ ಕಾರಣ ಎಂದರು.
ಡಾ.ಎಸ್.ಎನ್. ಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ನ್ಯಾಷನಲ್ ಮೆಡಿಕಲ್ ಕೌನ್ಸಿಲ್ ಅಧ್ಯಕ್ಷ ಡಾ.ಬಿ.ಎನ್. ಗಂಗಾಧರ, ಇಂಡಿಯನ್ ಅಕಾಡೆಮಿ ಆಫ್ ಪಿಡಿಯಾಟ್ರಿಕ್‌ನ ಡಾ.ಸಂತೋಷ ಸೋನು, ಸಿಐಎಪಿ ಅಧ್ಯಕ್ಷ ಡಾ.ಉಪೇಂದ್ರ ಕಿಂಜ್ವಾಡೇಕರ್, ಸಿಐಎಪಿ ಎಲೆಕ್ಟೆಡ್ ಅಧ್ಯಕ್ಷ ಡಾ.ಜಿ.ವಿ. ಬಸವರಾಜ, ಎಚ್‌ಕೆಇ ಉಪಾಧ್ಯಕ್ಷ ಡಾ.ಎಸ್.ಆರ್. ಹರವಾಳ, ಕಾರ್ಯದರ್ಶಿ ಡಾ.ಜಗನ್ನಾಥ ಬಿಜಾಪುರ, ಎಂಆರ್ ಮೆಡಿಕಲ್ ಕಾಲೇಜಿನ ಡೀನ್ ಡಾ.ಎಸ್.ಎಂ. ಪಾಟೀಲ್, ಸಂಘಟನಾ ಕಾರ್ಯದರ್ಶಿಗಳಾದ ಡಾ.ಬಸವರಾಜ ಎಂ.ಪಾಟೀಲ್ ಚಿಣಮಗೇರಿ, ಡಾ.ಸಂದೀಪ ವಿ.ಎಚ್., ಡಾ.ರೋಹಿತ ಭಂಡಾರಿ, ಡಾ.ವಿನೋದ ಉಪಳಾಂವಕರ್, ಪ್ರಮುಖರಾದ ಡಾ.ರೂಪಾ ಮಂಗಶೆಟ್ಟಿ, ಡಾ.ಶಾಂತಾ ಕೌಜಲಗಿ, ಡಾ.ರಾಜನ್, ಎಚ್‌ಕೆಇ ಆಡಳಿತ ಮಂಡಳಿ ಸದಸ್ಯರಾದ ಡಾ.ಎಸ್.ಬಿ. ಕಾಮರಡ್ಡಿ, ಡಾ.ನಾಗೇಂದ್ರ ಮಂಠಾಳೆ, ಡಾ.ಅನೀಲ್ ಪಟ್ಟಣ, ಮಹಾದೇವಪ್ಪ ರಾಂಪುರೆ ಇತರರಿದ್ದರು.
ಸಮ್ಮೇಳನ ಸಂಘಟನಾ ಸಮಿತಿಯ ಇನ್ನೊಬ್ಬ ಅಧ್ಯಕ್ಷ ಡಾ.ಎನ್.ಜಿ. ಗಚ್ಚಿನಮನಿ ಸ್ವಾಗತಿಸಿದರು. ಡಾ.ಆರುಂಧತಿ ಪಾಟೀಲ್ ನಿರೂಪಣೆ ಮಾಡಿದರು. ಡಾ.ವೀರಭದ್ರಪ್ಪ ಎಚ್ ಇತರರನ್ನು ಗೌರವಿಸಲಾಯಿತು.
ಇಂಡಿಯನ್ ಅಕಾಡೆಮಿ ಆಫ್ ಪಿಡಿಯಾಟ್ರಿಕ್ ರಾಜ್ಯ ಘಟಕ, ಕರ್ನಾಟಕ ಸ್ಟೇಟ್ ಇನ್ಫೆಕ್ಷನ್ ಡಿಸೀಜಸ್ ಅಸೋಸಿಯೇಷನ್ ಕಲಬುರಗಿ ಮತ್ತು ಬೀದರ್ ಜಿಲ್ಲಾ ಘಟಕ, ಎಂ.ಆರ್.ಮೆಡಿಕಲ್ ಕಾಲೇಜು, ಕೆಬಿಎನ್ ಮೆಡಿಕಲ್ ಕಾಲೇಜ್, ಇಎಸ್‌ಐಸಿ ಮೆಡಿಕಲ್ ಕಾಲೇಜು ಸಹಯೋಗದಡಿ ಸಮ್ಮೇಳನ ಸಂಘಟಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net