ಕಾಪು ತಾಪಂ ಸಭೆಗೆ ಅಧಿಕಾರಿಗಳ ಗೈರು

tp new
Published on

ಪಡುಬಿದ್ರಿ: ಸುಮಾರು 30 ಇಲಾಖೆ ಅಧಿಕಾರಿಗಳು ಹಾಜರಿರಬೇಕಾದ ಸಭೆಯಲ್ಲಿ ಹೆಚ್ಚಿನ ಇಲಾಖೆ ಅಧಿಕಾರಿಗಳ ಗೈರು ಕಾಪು ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸದಸ್ಯರ ಆಕ್ರೋಶಕ್ಕೆ ಕಾರಣವಾಯಿತು.

ತಾ.ಪಂ.ಅಧ್ಯಕ್ಷೆ ಶಶಿಪ್ರಭಾ ಶೆಟ್ಟಿ ಅಧ್ಯಕ್ಷತೆಯಲ್ಲಿ ಕಾಪು ಪುರಸಭೆ ಸಭಾಂಗಣದಲ್ಲಿ ಸೋಮವಾರ ನೂತನ ಕಾಪು ತಾ.ಪಂ ಸಾಮಾನ್ಯ ಸಭೆ ಆರಂಭದಲ್ಲಿ ಕೇವಲ ಬೆರಳೆಣಿಕೆ ಅಧಿಕಾರಿಗಳು ಪಾಲ್ಗೊಂಡಿದ್ದು, ಸಭೆ ಮಧ್ಯೆ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಕರೆ ಮಾಡಿದ ಬಳಿಕ ಕೆಲ ಅಧಿಕಾರಿಗಳು ಹಾಜರಾದರು. ಸಮಸ್ಯೆಗಳ ಬಗ್ಗೆ ಉತ್ತರಿಸಬೇಕಾದ ಅಧಿಕಾರಿಗಳ ಗೈರು ಕಂಡು ಸದಸ್ಯರು ಆಕ್ರೋಶಗೊಂಡರು. ಹಾಜರಿದ್ದ ಕೆಲ ಅಧಿಕಾರಿಗಳೂ ಸಭೆಯ ಬಗ್ಗೆ ಯಾವುದೇ ಪೂರ್ವ ತಯಾರಿಯಿಲ್ಲದೆ ನೀಡಿದ ಉತ್ತರವೂ ಸದಸ್ಯರನ್ನು ಇನ್ನಷ್ಟು ಕೆರಳಿಸಿತು.

ಈ ಬಗ್ಗೆ ಪ್ರತಿಕ್ರಿಯಿಸಿದ ಕಾರ್ಯ ನಿರ್ವಹಣಾಧಿಕಾರಿ ವಿವೇಕಾನಂದ ಗಾಂವ್ಕರ್, ಕಾಪು ತಾಲೂಕಿನಲ್ಲಿ ಎಲ್ಲ ಇಲಾಖೆ ಕಚೇರಿಗಳು ಕಾರ್ಯಾರಂಭಿಸದ ಕಾರಣ ಜಿಲ್ಲಾ ಕಚೇರಿಗಳಿಗೆ ಸಭೆಯ ಮಾಹಿತಿ ರವಾನಿಸಲಾಗಿದೆ. ಅಲ್ಲಿಂದ ತಾಲೂಕಿನಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡ ಅಧಿಕಾರಿಗಳಿಗೆ ಮಾಹಿತಿ ನೀಡಬೇಕಿತ್ತು. ಮುಂದಿನ ದಿನಗಳಲ್ಲಿ ತಪ್ಪನ್ನು ಸರಿಪಡಿಸಿ ಅಧಿಕಾರಿಗಳು ಸಭೆಗೆ ಹಾಜರಾಗುವಂತೆ ನೋಡಿಕೊಳ್ಳುವುದಾಗಿ ಹೇಳಿದರು.

ಅಂಗನವಾಡಿ ಕಟ್ಟಡ ನಿರ್ಮಿಸಿ

ಕೋಟೆ ಮಟ್ಟು ವ್ಯಾಪ್ತಿಯ ಮೂರು ಅಂಗನವಾಡಿಗಳು ನಾದುರಸ್ತಿಯಲ್ಲಿದ್ದು, ನಾಲ್ಕೂವರೆ ವರ್ಷಗಳಲ್ಲಿ ನೂತನ ಅಂಗನವಾಡಿ ಕಟ್ಟಡ ರಚನೆಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ತಿಂಗಳ ಹಿಂದೆ ಉಂಟಾದ ಮಳೆ, ನೆರೆಯಿಂದ ಇಲ್ಲಿ ಸಾಕಷ್ಟು ಸಂಕಷ್ಟಗಳು ಉಂಟಾಗಿದೆ ಇದಕ್ಕೆ ಹೊಣೆ ಯಾರು ಎಂದು ಸದಸ್ಯ ರಾಜೇಶ್ ಅಂಬಾಡಿ ಪ್ರಶ್ನಿಸಿದರು. ಮಟ್ಟುವಿನ ಸರ್ಕಾರಿ ಶಾಲಾ ಕಟ್ಟಡದಲ್ಲಿ ಕಾರ್ಯನಿರ್ವಹಿಸುವ ಅಂಗನವಾಡಿ ದುರಸ್ತಿ ಮಾಡಲು ನಮಗೆ ಅವಕಾಶವಿಲ್ಲ. ಇಲಾಖೆಯ ಮಾಸಿಕ 1000 ರೂ. ಬಾಡಿಗೆಗೆ ಕಟ್ಟಡ ಸಿಗದ ಪರಿಣಾಮ ಅಂಗನವಾಡಿಗಳನ್ನು ಸ್ಥಳಾಂತರಿಸಲು ತೊಂದರೆಯಾಗುತ್ತಿದೆ ಎಂದು ಸಿಡಿಪಿಒ ವೀಣಾ ವಿವೇಕಾನಂದ ಉತ್ತರಿಸಿದರು.

ಗ್ರಾಪಂ ಕಟ್ಟಡ ನಿರ್ಮಾಣಕ್ಕೆ ಅವಕಾಶ ನೀಡಿ

ಮುದರಂಗಡಿ ಗ್ರಾಪಂನ ಕಟ್ಟಡ ನಿರ್ಮಾಣಕ್ಕೆ ಗ್ರಾಪಂನಿಂದ ನಿರ್ಣಯ ಕೈಗೊಂಡು ತಾಪಂನಲ್ಲಿ ಅನುಮೋದನೆ ಪಡೆದರೂ ಕಾಮಗಾರಿಗೆ ತಡೆವೊಡ್ಡಲಾಗಿದೆ. ಪಿಡಿಒ ಅವರನ್ನೂ ವರ್ಗಾವಣೆ ಮಾಡಿ ಅಭಿವೃದ್ಧಿಗೆ ಹಿನ್ನಡೆಯಾಗಿದೆ ಎಂದು ಮೈಕೆಲ್ ಡಿಸೋಜ ದೂರಿದರು. ಕಾರ್ಯನಿರ್ವಹಣಾಧಿಕಾರಿ ಪ್ರತಿಕ್ರಿಯಿಸಿ, ಜಿಪಂ ನಿರ್ಣಯವಾಗದ ಹೊರತು ಕಟ್ಟಡ ಕೆಡವಲು ಅವಕಾಶ ಇರುವುದಿಲ್ಲ. ಅಲ್ಲದೆ ಕರ್ತವ್ಯ ಲೋಪವೆಸಗಿದ ಪಿಡಿಒ ಅವರನ್ನು ಅಮಾನತು ಮಾಡಲಾಗಿದೆ. ಅಗತ್ಯ ಕಾಮಗಾರಿ ಎಂಬ ಕಾರಣಕ್ಕೆ ಅ.20ರಂದು ಜಿಪಂಗೆ ಪತ್ರ ಬರೆಯಲಾಗಿದೆ. ಅದಕ್ಕೆ ಪ್ರತ್ಯುತ್ತರ ಬಂದಿಲ್ಲ. ಮತ್ತೊಮ್ಮೆ ತಾಪಂ ಸಭೆಯ ನಿರ್ಣಯವನ್ನು ಜಿಪಂಗೆ ತಿಳಿಸಲಾಗುವುದು ಎಂದರು.

ಪ್ರತ್ಯೇಕ ಅನುದಾನ ಒದಗಿಸಿ

ಒಂದು ವರ್ಷ ಹತ್ತು ತಿಂಗಳು ಕಳೆದರೂ ಇದುವರೆಗೆ ತಾ.ಪಂ.ಗೆ ಯಾವುದೇ ಅನುದಾನ ಬಿಡುಗಡೆಯಾಗದೆ ಮಾಸಿಕ ಅಗತ್ಯ ಪಾವತಿಗಳಿಗೆ ತೊಂದರೆಯಾಗುತ್ತಿದೆ. ಛಾಯಾಪ್ರತಿ ಮುದ್ರಣ ಯಂತ್ರವೂ ಇಲ್ಲದೆ ಸಿಬ್ಬಂದಿ ಕೈಯಿಂದಲೇ ವ್ಯಯಿಸಬೇಕಾಗಿದೆ ಎಂದು ಅಧಿಕಾರಿಗಳು ಅಳಲು ತೋಡಿಕೊಂಡರೆ, ಛಾಯಾಪ್ರತಿ ಯಂತ್ರ ನೀಡುವಂತೆ ಗೀತಾ ವಾಗ್ಳೆ ಶಾಸಕರಿಗೆ ಒತ್ತಾಯಿಸಿದರು. ಶಾಸಕರ ನಿಧಿಯನ್ನು ನೇರವಾಗಿ ನೀಡಲು ಅವಕಾಶವಿಲ್ಲ. ದಾನಿಗಳ ಸಹಕಾರದಿಂದ ಯಂತ್ರ ನೀಡುವ ಭರವಸೆ ಶಾಸಕರು ನೀಡಿದರು. ಕಾಪು ತಾಪಂಗೆ ಪ್ರತ್ಯೇಕ ಅನುದಾನಕ್ಕಾಗಿ ಮುಂದಿನ ಅಧಿವೇಶನ ಸಂದರ್ಭ ಮುಖ್ಯಮಂತ್ರಿ ಹಾಗೂ ಅಧಿಕಾರಿಗಳನ್ನು ಸರ್ವ ಪಕ್ಷ ಸದಸ್ಯರ ನಿಯೋಗದೊಂದಿಗೆ ಭೇಟಿ ಮಾಡಿ ಒತ್ತಡ ತರಲಾಗುವುದು ಎಂದರು.

ಸ್ಥಾಯಿ ಸಮಿತಿ ಘೋಷಣೆ

ಕಾಪು ತಾಪಂನ ಸಾಮಾನ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಯು.ಸಿ ಶೇಖಬ್ಬ, ಸದಸ್ಯರಾಗಿ ನಾಗೇಶ್ ಪೂಜಾರಿ, ರಾಜೇಶ್ ಶೆಟ್ಟಿ, ರೇಣುಕಾ ಪುತ್ರನ್, ಹಣಕಾಸು, ಲೆಕ್ಕ ಪರಿಷ್ಕರಣೆ, ಯೋಜನೆ ಸ್ಥಾಯಿ ಸಮಿತಿಗೆ ಅಧ್ಯಕ್ಷರಾಗಿ ಶಶಿಪ್ರಭಾ ಶೆಟ್ಟಿ, ಸದಸ್ಯರಾಗಿ ಕೇಶವ ಮೊಯ್ಲಿ, ಸುಜಾತ, ಮೈಕೆಲ್ ಡಿಸೋಜ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷರಾಗಿ ದಿನೇಶ್ ಕೋಟ್ಯಾನ್, ಸದಸ್ಯರಾಗಿ ರಾಜೇಶ್ ಅಂಬಾಡಿ, ನೀತಾ ಗುರುರಾಜ್, ಗೀತಾ ವಾಗ್ಳೆ ಅವರನ್ನು ಘೋಷಿಸಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net