

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
ಪರಿಸರ ಸೂಕ್ಷ್ಮ ಪ್ರದೇಶವಾಗಿರುವ ಜಿಲ್ಲೆಯ ಕರಾವಳಿ ತೀರದಲ್ಲಿ ರಾತ್ರಿ ವೇಳೆ ಯಾವುದೇ ಮೋಜು ಮಸ್ತಿ ಪಾರ್ಟಿಗಳಿಗೆ ಅವಕಾಶ ನೀಡದಂತೆ ಕರಾವಳಿ ತೀರ ವ್ಯಾಪ್ತಿಯ ಗ್ರಾಪಂ ಪಿಡಿಒಗಳಿಗೆ ಜಿಲ್ಲಾಧಿಕಾರಿ ಕೆ.ವಿದ್ಯಾಕುಮಾರಿ ಸೂಚನೆ ನೀಡಿದರು. ಕಾಪು ತಾಲೂಕು ಆಡಳಿತ ಸೌಧದಲ್ಲಿ ಗುರುವಾರ ಕಾಪು ತಾಲೂಕು ಮಟ್ಟದ ಜನತಾ ದರ್ಶನ ಕಾರ್ಯಕ್ರಮ ಉದ್ಘಾಟಿಸಿ ಸಾರ್ವಜನಿಕ ಅಹವಾಲು ಸ್ವೀಕರಿಸಿ ಮಾತನಾಡಿದರು.
ಚುನಾವಣೆ ಮೊದಲೇ ಇಂತಹ ಕಾರ್ಯಕ್ರಮಗಳಿಗೆ ಪರವಾನಗಿ ನೀಡದಂತೆ ಸೂಚನೆ ನೀಡಲಾಗಿತ್ತು. ರಾತ್ರಿ ವೇಳೆ ಕೆಲವೊಂದು ಜಲಚರಗಳು ಸಮುದ್ರತೀರಕ್ಕೆ ಬರುವ ಕಾರಣ ಅವುಗಳಿಗೆ ತೊಂದರೆಯಾಗುತ್ತವೆ. ಪರಿಸರ ಹಾಗೂ ಶಬ್ದಮಾಲಿನ್ಯದಿಂದಲೂ ಸಾರ್ವಜನಿಕವಾಗಿ ಸಮಸ್ಯೆಗಳಾಗುತ್ತಿವೆ. ಕಾರ್ಯಕ್ರಮ ನಡೆಸಲು ಗ್ರಾಪಂ ವ್ಯಾಪ್ತಿಯಲ್ಲಿ ಸೂಕ್ತ ಸ್ಥಳ ಗುರುತಿಸಿ ಅಲ್ಲಿ ಅವಕಾಶ ಕಲ್ಪಿಸಬೇಕು ಎಂದರು.
ಕರಾವಳಿ ತೀರದಲ್ಲಿ ಪೊಲೀಸ್ ಗಸ್ತು ಸಂಚಾರಕ್ಕೂ ಪೊಲೀಸ್ ಇಲಾಖೆಗೆ ಸೂಚಿಸಲಾಗುವುದು ಎಂದು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಹೇಳಿದರು. ಜನತಾದರ್ಶನದಲ್ಲಿ ಕಂದಾಯ, ರಸ್ತೆ, ಸೇತುವೆ, ಕಿರು ಸೇತುವೆ, ಮೆಸ್ಕಾಂ, ಕೃಷಿ, ಮೀನುಗಾರಿಕಾ ಇಲಾಖೆ ಸೇರಿ 59 ಅರ್ಜಿ ಬಂದಿದ್ದು, ಸಂಬಂಧಿತ ಇಲಾಖೆಗೆ ಮುಂದಿನ 15 ದಿನಗಳಿಂದ ಒಂದು ತಿಂಗಳೊಳಗೆ ಇತ್ಯರ್ಥ ಮಾಡಿ ಅರ್ಜಿದಾರರಿಗೆ ಸೂಕ್ತ ಮಾಹಿತಿ ನೀಡಿ, ಐಪಿಜಿಆರ್‌ಎಸ್‌ನಲ್ಲಿ ಅಪ್‌ಲೋಡ್ ಮಾಡಲು ಸೂಚಿಸಲಾಗಿದೆ. ಪಹಣಿ ತೀರ್ಮಾನವಾಗುವಂತಹ ಕೆಲ ಅರ್ಜಿಗಳು ಸ್ಥಳದಲ್ಲಿ ಇತ್ಯರ್ಥವಾಗಿ ಮುಂದಿನ ಕ್ರಮಕ್ಕೆ ನಿರ್ದೇಶಿಸಕಾಯಿತು.
ಮೀನುಗಾರಿಕೆ, ಪಶುಸಂಗೋಪನೆ ಇಲಾಖೆಯಿಂದ ಫಲಾನುಭವಿಗಳಿಗೆ ಸವಲತ್ತು ಹಾಗೂ ಆಹಾರ ಇಲಾಖೆಯಿಂದ ಪಡಿತರ ಚೀಟಿ ವಿತರಿಸಲಾಯಿತು.
ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಕುಂದಾಪುರ ಉಪವಿಭಾಗಾಧಿಕಾರಿ ರಶ್ಮಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಿದ್ಧಲಿಂಗಪ್ಪ, ಉಡುಪಿ ವಿಭಾಗೀಯ ಅರಣ್ಯಾಧಿಕಾರಿ ಗಣಪತಿ, ಸರ್ವೇ ಇಲಾಖೆ ರವೀಂದ್ರ, ಪುರಸಭೆ ಮುಖ್ಯಾಧಿಕಾರಿ ನಾಗರಾಜ್ ಉಪಸ್ಥಿತರಿದ್ದರು. ತಹಸೀಲ್ದಾರ್ ಪ್ರತಿಭಾ ಆರ್. ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಬಾಬುರಾಯ ಆಚಾರ್ಯ ನಿರೂಪಿಸಿದರು. ತಾಪಂ ಕಾರ್ಯನಿರ್ವಹಣಾಧಿಕಾರಿ ಜೇಮ್ಸ್ ಡಿಸಿಲ್ವ ವಂದಿಸಿದರು.
ಹೆದ್ದಾರಿಗೆ ಸಂಬಂಧಪಟ್ಟಂತೆ ಈಗಾಗಲೇ ಎಸ್‌ಪಿ, ಸಿಇಒ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರೊಂದಿಗೆ ಸ್ಥಳೀಯ ಪ್ರಮುಖರನ್ನೊಳಗೊಂಡು ವಾರದ ಹಿಂದೆ ಸಭೆ ನಡೆಸಲಾಗಿದೆ. ಸಭೆಯಲ್ಲಿ ಸ್ಥಳೀಯ ಕೆಲ ಸಮಸ್ಯೆಗಳನ್ನು ಸ್ಥಳೀಯ ಪ್ರಮುಖರು ಹೇಳಿದ್ದು, ಅದರ ಬಗ್ಗೆ ಸಂಬಂಧ ಪಟ್ಟ ಗುತ್ತಿಗೆದಾರರು ಮತ್ತು ಯೋಜನಾ ನಿರ್ದೇಶಕರಿಗೆ ಮುಂದಿನ 3 ತಿಂಗಳೊಳಗೆ ಸರಿಪಡಿಸುವಂತೆ ನಿರ್ದೇಶನ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ವಿದ್ಯಾಕುಮಾರಿ ಹೇಳಿದರು. ಜನತಾದರ್ಶನ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಬೀದಿ ದೀಪ, ನೆರೆ ನೀರಿನ ಸಮಸ್ಯೆ ಶೀಘ್ರದಲ್ಲಿ ಇತ್ಯರ್ಥ ಮಾಡುವಂತೆ ಸೂಚಿಸಲಾಗಿದೆ. ರಸ್ತೆ ವಿಭಜಕ, ಸರ್ವೀಸ್ ರಸ್ತೆಗೆ ಸಂಬಂಧಿತ ಸಮಸ್ಯೆ ಇತ್ಯರ್ಥ ಮಾಡಿದ ನಂತರ ಇನ್ನೊಂದು ಸಲ ಪ್ರಗತಿ ಪರಿಶೀಲನಾ ಸಭೆ ನಡೆಸಲಾಗುವುದು. ಕೆಲವೆಡೆ ಎರಡು ಇಲಾಖೆಗಳ ಹೊಂದಾಣಿಕೆಯಿಲ್ಲದೆ ರಸ್ತೆ ಸಮಸ್ಯೆಗಳಾಗುತ್ತಿರುವ ಬಗ್ಗೆ ದೂರು ಬಂದಿದ್ದು, ಎರಡೂ ಇಲಾಖೆ ಜಂಟಿಯಾಗಿ ಸ್ಥಳ ಪರಿಶೀಲಿಸಿ ಸಮನ್ವಯತೆಯಿಂದ ಕ್ರಮ ತೆಗೆದುಕೊಳ್ಳುವಂತೆ ಸಂಬಂಧಿತ ಇಲಾಖೆಗಳಿಗೆ ತಿಳಿಸಲಾಗಿದೆ ಎಂದರು.
ನಂದಿಕೂರು ಎಂ11 ಕೈಗಾರಿಕಾ ಘಟಕದ ಬಗ್ಗೆ ಸಾರ್ವಜನಿಕರು ದೂರು ನೀಡಿದ್ದು, ಸಮಸ್ಯೆ ಇದ್ದಲ್ಲಿ ಕಂಪನಿ ಅದನ್ನು ಪರಿಹಾರ ಮಾಡಬೇಕಿದೆ. ಸರಿಯಾದ ಪ್ರೊಸೀಜರ್ ಅನುಸರಿಸದಿದ್ದಲ್ಲಿ ಸ್ಥಳೀಯವಾಗಿ ಪ್ರತಿಭಟನೆ ಬಂದಾಗ ಸೂಕ್ತ ಕ್ರಮವಹಿಸಲು ಹಿಂಜರಿಯುವುದಿಲ್ಲ. ಸರ್ಕಾರದ ಮೇಲಧಿಕಾರಿಗಳ ಗಮನಕ್ಕೂ ತಂದು ಅದನ್ನು ಯಾವ ರೀತಿ ಕ್ರಮವಹಿಸಬೇಕೆನ್ನುವುದರ ಬಗ್ಗೆಯೂ ತೀರ್ಮಾನಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.
ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಬಸ್ ಸೌಲಭ್ಯ ಕೊರತೆ ಬಗ್ಗೆ ದೂರು ಬಂದಿದ್ದು, ರೂಟ್ ಹಾಗೂ ಪರವಾನಗಿ ಪಡೆದು ಕೆಲ ಬಸ್‌ನವರು ಓಡಾಟ ನಡೆಸದಿರುವ ಬಗ್ಗೆ ಪರಿಶೀಲಿಸಿದಾಗ ಗಮನಕ್ಕೆ ಬಂದಿದೆ. ಅಂತವರ ಪರವಾನಗಿ ರದ್ದು ಮಾಡುವ ಬಗ್ಗೆಯೂ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಕಟ್ಟು ನಿಟ್ಟಿನ ನಿರ್ಧಾರ ಕೈಗೊಳ್ಳಲಾಗಿದೆ. ಜನಕ್ಕೆ ಅವಶ್ಯಕತೆಯಿರುವಲ್ಲಿ ಸರ್ಕಾರಿ ಬಸ್ ಓಡಾಟಕ್ಕೂ ಕ್ರಮ ವಹಿಸಲಾಗುವುದು. ಉಡುಪಿ ಜಿಲ್ಲೆಗೆ 130 ಹೊಸ ಬಸ್‌ಗಳಿಗೆ ಉಡುಪಿ ವಿಭಾಗದಿಂದ ಕೆಸ್ಸಾರ್ಟಿಸಿ ಮುಖ್ಯ ಕಚೇರಿಗೆ ಬೇಡಿಕೆ ಸಲ್ಲಿಕೆಯಾಗಿದೆ. ಬಸ್ ಖರೀದಿಯಾದ ನಂತರ ಅವಶ್ಯವಿರುವೆಡೆಗೆ ಓಡಾಟಕ್ಕೆ ಕ್ರಮವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಮಳೆಯಿಂದ ಜಿಲ್ಲೆಯಲ್ಲಿ ದೊಡ್ಡಮಟ್ಟದ ಹಾನಿಯಾಗಿಲ್ಲ. ತಗ್ಗು ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಅಂತಹ ಪ್ರದೇಶದಿಂದ 40 ಜನರನ್ನು ರಕ್ಷಣೆ ಮಾಡಲಾಗಿದೆ. ನೆರೆ ಇಳಿದ ಬಳಿಕ ಅವರ ಮನೆಗಳಿಗೆ ವಾಪಸಾಗಿದ್ದಾರೆ. ದೊಡ್ಡ ಮಟ್ಟದಲ್ಲಿ ಮನೆ ಹಾನಿ ಅಥವಾ ಸಾವು ನೋವಾದ ಘಟನೆ ನಡೆದಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದರು.