ಕಾಪು ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗೆ ಮೂರನೇ ಬಾರಿ ವಿಘ್ನ !

High Court Logo
Published on

ಪಡುಬಿದ್ರಿ: ರಾಜ್ಯದ ಪುರಸಭೆ ಮತ್ತು ಪಟ್ಟಣ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳ ಮೀಸಲು ನಿಗದಿ ಮಾಡಿ ರಾಜ್ಯ ಸರ್ಕಾರ ಹೊರಡಿಸಿದ್ದ ಅಧಿಸೂಚನೆಗೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದ ಪರಿಣಾಮ ಕಾಪು ಪುರಸಭೆ ದ್ವಿತೀಯ ಅವಧಿ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗೆ 3ನೇ ಬಾರಿ ವಿಘ್ನ ಉಂಟಾಗಿದೆ.

ಈ ಹಿಂದೆ ರಾಜ್ಯದಲ್ಲಿ ಎರಡು ಬಾರಿ ಮೀಸಲಾತಿ ಬಗ್ಗೆ ತಗಾದೆ ನ್ಯಾಯಾಲಯ ಮೆಟ್ಟಿಲೇರಿದ ಪರಿಣಾಮ 22 ತಿಂಗಳಿನಿಂದ ಕಾಪು ಪುರಸಭೆಯಲ್ಲಿ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಯಾಗದೆ ಜನಪ್ರತಿನಿಧಿಗಳು ಸಂಕಷ್ಟಪಟ್ಟಿದ್ದರು. ನೂತನ ಪುರಸಭೆಯಾಗಿ ರಚನೆಯಾದ ಕಾಪು ಪುರಸಭೆಯ ಚುನಾಯಿತ ಸದಸ್ಯರ ಅವಧಿ ಇನ್ನು ಕೇವಲ 8 ತಿಂಗಳಿಗಷ್ಟೇ ಸೀಮಿತವಾಗಿದೆ.

ಅದೇ ರೀತಿ ರಾಜ್ಯದ ಮೀಸಲಿನಂತೆ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ 12 ಸದಸ್ಯ ಬಲದ ಕಾಪು ತಾಪಂ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಗೆ ಆಗಸ್ಟ್ 10ರಂದು ಚುನಾವಣೆ ಪ್ರಕ್ರಿಯೆ ನಡೆದಿದ್ದರೂ, ಅಯ್ಕೆ ಘೋಷಣೆಗೆ ಹೈಕೋರ್ಟ್ ಮುಂದಿನ ಆದೇಶವರೆಗೆ ತಡೆಯಾಜ್ಞೆ ನೀಡಿದೆ. ಇಲ್ಲಿಯೂ ಚುನಾಯಿತ ಪ್ರತಿನಿಧಿಗಳ ಅವಧಿ ಬೆರಳೆಣಿಕೆ ತಿಂಗಳು ಮಾತ್ರ ಉಳಿದಿದೆ. ಒಟ್ಟಿನಲ್ಲಿ ಮೀಸಲು ಜಿದ್ದಿನಲ್ಲಿ ಕಾಪು ಪುರಸಭೆ ಹಾಗೂ ತಾಪಂ ಜನಪ್ರತಿನಿಧಿಗಳು ಅತಂತ್ರರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net