

ವಿಜಯವಾಣಿ ಸುದ್ದಿಜಾಲ ಉಡುಪಿ
ಜಿಲ್ಲೆಯಲ್ಲಿ ಐದಾರು ದಿನದಿಂದ ಭಾರಿ ಗಾಳಿಮಳೆಯಿಂದಾಗಿ ಮರಗಳು ತಂತಿಗಳ ಮೇಲೆ ಉರುಳಿ ವಿದ್ಯುತ್ ಸಮಸ್ಯೆ ವ್ಯಾಪಕವಾಗಿದೆ. ನನ್ನ ಮನೆಯಲ್ಲೂ ಮೊನ್ನೆ ದಿನವಿಡಿ ಕರೆಂಟ್ ಇರಲಿಲ್ಲ. ಮೆಸ್ಕಾಂನಲ್ಲಿ ಲೈನ್ಮೆನ್ ಕೊರತೆ ಇರುವುದು ಗಮನಕ್ಕಿದೆ. ಆದರೂ ಸಹ ಇನ್ನೂ 2-3 ತಿಂಗಳು ಜಾಗೃತಿಯಿಂದ ಕಾರ್ಯ ನಿರ್ವಹಿಸಬೇಕು. ಅಧಿಕಾರಿಗಳು ಮೊಬೈಲ್ ಸ್ವಿಚ್ಡ್ ಆಫ್ ಮಾಡಬೇಡಿ ಎಂದು ಕಾಪು ಶಾಸಕ ಗುರ್ಮೆ ಸುರೇಶ ಶೆಟ್ಟಿ ಸಲಹೆ ನೀಡಿದರು.
ಶಾಲೆಗಳೂ ಸಹ ನಾಳೆಯಿಂದ ಆರಂಭಗೊಳ್ಳುತ್ತಿದ್ದು ನಿರಂತರ ವಿದ್ಯುತ್ ಪೂರೈಕೆಯಾಗಬೇಕು. ಕುಡಿಯುವ ನೀರು ಪೂರೈಕೆಗೂ ಸಹ ವಿದ್ಯುತ್ ಒದಗಿಸಲು ಆದ್ಯತೆ ಕೊಡಬೇಕು. ಅರಣ್ಯ ಇಲಾಖೆ ಹಾಗೂ ಮೆಸ್ಕಾಂ ಅಧಿಕಾರಿಗಳು ಸಹಭಾಗಿತ್ವದಲ್ಲಿ ಕೆಲಸ ಮಾಡಬೇಕು. ಸಾಮಾಜಿಕ ಅರಣ್ಯಕ್ಕೆ ಗಮನ ಕೊಡಬೇಕು. ರೋಡ್ಗಳ 6 ಮೀಟರ್ ದೂರದಲ್ಲಿ ಗಿಡ ನೆಡಬೇಕು. ಗ್ರಾಪಂನವರು ತಮ್ಮ ವ್ಯಾಪ್ತಿಯ ಪ್ರತಿ ಗ್ರಾಮದಲ್ಲೂ ಮಳೆ ನೀರು ಸರಾಗವಾಗಿ ಹರಿದು ಹೋಗುವಂತಾಗಲು ಚರಂಡಿ, ತೋಡುಗಳ ಹೂಳೆತ್ತಿಸಬೇಕು ಎಂದರು.
ಸಭೆಯಲ್ಲಿ ತಹಸೀಲ್ದಾರ ಗುರುರಾಜ, ಅರಣ್ಯ ಹಾಗೂ ವಿದ್ಯುತ್ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಉಡುಪಿ ತಾಲೂಕು ಆರೋಗ್ಯಾಧಿಕಾರಿ ಡಾ. ವಾಸುದೇವ ರಾವ್ ಮಾತನಾಡಿ, ಉಡುಪಿ ತಾಲೂಕಿಗೆ ಕೋವಿಡ್ ಟೆಸ್ಟ್ ಕಿಟ್ ಪೂರೈಕೆಯಾಗಿದೆ. ಉಸಿರಾಟದ ಸಮಸ್ಯೆ ಇರುವವರನ್ನು ಪರೀಕ್ಷಿಸಬೇಕಿದೆ. ಗರ್ಭಿಣಿಯರು, ಗಂಭೀರ ಆರೋಗ್ಯ ಸಮಸ್ಯೆಯುಳ್ಳವರು ಓಡಾಡುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಮಲೇರಿಯಾ, ಡೆಂಘೆ ನಿಯಂತ್ರಣಕ್ಕಾಗಿ ಆಶಾ ಕಾರ್ಯಕರ್ತೆಯರು ಮನೆ ಮನೆ ಭೇಟಿ ನೀಡಲಿದ್ದಾರೆ. ನೆರೆಪೀಡಿತ ಪ್ರದೇಶಗಳಲ್ಲಿ ಸಾಂಕ್ರಾಮಿಕ ರೋಗ ಹರಡದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಶಾಲೆಗಳ ಹಳೆ ಕಟ್ಟಡ, ಆವರಣ ಗೋಡೆ ಕುಸಿಯಬಹುದು. ಕ್ಷೇತ್ರ ಶಿಕ್ಷಣಾಧಿಕಾರಿಗಳು ನಿಗಾ ವಹಿಸಬೇಕು. ಜಲಜೀವನ ಮಿಷನ್ ಯೋಜನೆಯ ಶೇ. 90 ಕಾಮಗಾರಿ ಪೂರ್ಣವಾಗಿದೆ. ಪೈಪ್ಲೈನ್, ಟ್ಯಾಂಕ್ ಸಂಪರ್ಕ ಕಾರ್ಯ ಮುಗಿದ ಕೂಡಲೇ ವಾರಾಹಿ ಜಲಮೂಲದಿಂದ ನಲ್ಲಿ ಮೂಲಕ ಕುಡಿಯುವ ನೀರು ಒದಗಿಸಲಾಗುವುದು. | ಗುರ್ಮೆ ಸುರೇಶ ಶೆಟ್ಟಿ. ಕಾಪು ಶಾಸಕ