ಗಣಿಗಾರಿಕೆಯ ಪ್ರಸ್ತಾವಗಳನ್ನು ತಿರಸ್ಕರಿಸಬೇಕು: ತೋಂಟದ ಶ್ರಿಗಳು

09GDG05
Published on

ವಿಜಯವಾಣಿ ಸುದ್ದಿಜಾಲ ಗದಗ

ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸೋಮವಾರ ಜರುಗಿದ ರಾಜ್ಯ ವನ್ಯಜಿವಿ ಮಂಡಳಿ ಸಭೆಯಲ್ಲಿ ಈಗಾಗಲೇ ವನ್ಯಜಿವಿಧಾಮ ಎಂದು ಘೋಷಣೆ ಆಗಿರುವ ಕಪ್ಪತಗುಡ್ಡದಿಂದ 10 ಕಿಮಿ ವ್ಯಾಪ್ತಿಯಲ್ಲಿ ಗಣಿಗಾರಿಕೆಗಾಗಿ ಬಂದ 28 ಪ್ರಸ್ತಾವಗಳನ್ನು ಮುಂದೂಡಿರುವುದು ನೆಮ್ಮದಿ ತಂದಿದೆ. ಆದರೆ, ರಾಜ್ಯ ವನ್ಯಜಿವಿ ಮಂಡಳಿ ಪ್ರಸ್ತಾವಗಳನ್ನು ಸರ್ಕಾರ ಸಂರ್ಪೂಣವಾಗಿ ತಿರಸ್ಕರಿಸಬೇಕು ಎಂದು ತೋಂಟದ ಸಿದ್ಧರಾಮ ಶ್ರೀಗಳು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವಅವರು, ಕಪ್ಪತಗುಡ್ಡದ ಸೂಕ್ಷ$್ಮವಲಯ ವ್ಯಾಪ್ತಿಯನ್ನು ರಾಜ್ಯ ಸರ್ಕಾರ 10 ಕಿಮೀ ಎಂದು ಸ್ಪಷ್ಟವಾಗಿ ಘೋಷಿಸುವುದರ ಜತೆಗೆ ಆ ಪ್ರದೇಶದಲ್ಲಿ ಯಾವುದೇ ಗಣಿಗಾರಿಕೆ ನಡೆಸದಂತೆ ಸ್ಪಷ್ಟ ಆದೇಶ ನೀಡಬೇಕು. ಈಗ ಬಂದಿರುವ 28 ಪ್ರಸ್ತಾವಗಳನ್ನು ಕೇವಲ ಮುಂದೂಡಲಾಗಿದೆ. ಇದರಿಂದ ಆತಂಕ ದೂರವಾಗದೇ ತೂಗುಗತ್ತಿ ಇನ್ನೂ ಮೇಲಿದೆ ಎಂಬಂತಾಗಿದೆ. ಕಪ್ಪತಗುಡ್ಡವು ಜೀವವೈವಿಧ್ಯ ಹಾಗೂ ಸಸ್ಯವೈವಿಧ್ಯಗಳ ಪ್ರದೇಶವಾಗಿದೆ. ಮಧ್ಯಕರ್ನಾಟಕದ ಸಹ್ಯಾದ್ರಿ ಎನಿಸಿದೆ. ಸಾವಿರಾರು ವನಸ್ಪತಿ ಸಸ್ಯಗಳ ಆಗರವಾಗಿರುವ ಈ ಪ್ರದೇಶದಲ್ಲಿ ಗಣಿಗಾರಿಕೆ ನಡೆಸುವುದು ಜೀವಸಂಕುಲಕ್ಕೆ ಮಾರಕವಾಗುತ್ತದೆ. ಗಣಿಗಾರಿಕೆಯ ಧೂಳಿನಿಂದ ಪರಿಸರ ಹಾನಿಯ ಜೊತೆಗೆ ಮಳೆಯ ಮೂಲ ಸ್ರೋತವನ್ನೇ ನಾಶಗೊಳಿಸಿದಂತಾಗುತ್ತದೆ. ಆದ್ದರಿಂದ ಈ ಪ್ರದೇಶದಲ್ಲಿ ಗಣಿಗಾರಿಕೆಗೆ ಅವಕಾಶ ಕಲ್ಪಿಸಿಕೊಡಬಾರದು ಎಂದು ಶ್ರೀಗಳು ಆಗ್ರಹಿಸಿದ್ದಾರೆ.
ಬೆಳಗಾವಿಯ ಪ್ರಾದೇಶಿಕ ಆಯುಕ್ತರ ಅಧ್ಯತೆಯಲ್ಲಿ ಮೇಲ್ವಿಚಾರಣೆಯ ಸಮಿತಿಯನ್ನು ರಚಿಸಿದ್ದು ಸ್ವಾಗತಾರ್ಹ.ಕಪ್ಪತಗುಡ್ಡದ ಪ್ರದೇಶದಲ್ಲಿ ಯಾವುದೇ ರೀತಿಯ ಗಣಿಗಾರಿಕೆ ನಡೆಯದಂತೆ ನೋಡಿಕೊಳ್ಳುವ ಆಡಳಿತ ವರ್ಗ, ಜನಸಮುದಾಯ ಮತ್ತು ಮಠಾಧೀಶ ಸೇರಿದಂತೆ ಎಲ್ಲರ ಜವಾಬ್ದಾರಿ ಆಗಿದೆ. ಈ ದಿಸೆಯಲ್ಲಿ ಪ್ರತಿಯೊಬ್ಬರೂ ಆಸಕ್ತಿ ವಹಿಸಬೇಕು ಎಂದು ಶ್ರೀಗಳು ಪ್ರಕಟಣೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net