ಹುಬ್ಬಳ್ಳಿ: ಉತ್ತರಪ್ರದೇಶದ ವಾರಾಣಸಿ ಬಳಿಯ ಕಪಿಲಧಾರಾ ಸರಹದ್ದಿನಲ್ಲಿ ಲಭ್ಯವಾದ ಕನ್ನಡ ಶಾಸನದ ಶಾಶ್ವತ ಸಂರಕ್ಷಣೆಯ ಕಾರ್ಯವು ಕಾಶಿ ಜ್ಞಾನಪೀಠದ ಹಿರಿಯ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರ ನೇತೃತ್ವದಲ್ಲಿ ಯಶಸ್ವಿಯಾಗಿ ನೆರವೇರಿದೆ.
ಕ್ರಿ.ಶ. 1645ರಿಂದ 1660ರ ಅವಧಿಯಲ್ಲಿ ರಾಜ್ಯವಾಳಿದ ಕರ್ನಾಟಕದ ಶಿವಮೊಗ್ಗ ಜಿಲ್ಲೆ ಕೆಳದಿ ಸಂಸ್ಥಾನದ ಶಿವಪ್ಪ ನಾಯಕ ಅರಸರು ಕನ್ನಡನಾಡಿನ ಪಂಚಕ್ರೋಶಿ ಯಾತ್ರಾಥಿರ್ಗಳ ಸ್ನಾನ ಮತ್ತು ಬಟ್ಟೆ ತೊಳೆಯುವ ಅನುಕೂಲಕ್ಕಾಗಿ ಉತ್ತರಪ್ರದೇಶದ ವಾರಾಣಸಿ ಹತ್ತಿರದ ಕಪಿಲಧಾರಾದಲ್ಲಿ ಬೃಹತ್ ಸರೋವರವನ್ನು ನಿರ್ಮಾಣ ಮಾಡಿದ್ದಾರೆ. ಈ ನೆನಪನ್ನು ಶಾಶ್ವತವಾಗಿಡಲು ಶಿವಪ್ಪ ನಾಯಕರು ಈ ಶಾಸನವನ್ನು ಬರೆಯಿಸಿರಬೇಕೆಂದು ಗಮನಿಸಲಾಗಿದೆ.
ಸರೋವರದ ಬಳಿಯೇ ಶಾಸನ ಅನಾಥವಾಗಿ ಬಿದ್ದಿರುವ ವಿಷಯ ತಿಳಿದ ತಕ್ಷಣ ಅದನ್ನು ಸುರಕ್ಷಿತ ಸ್ಥಳದಲ್ಲಿ ರಕ್ಷಣೆ ಮಾಡಲು ಸೂಚಿಸಿದ್ದ ಕಾಶಿ ಜ್ಞಾನ ಪೀಠದ ಹಿರಿಯ ಜಗದ್ಗುರುಗಳು ಪ್ರಸ್ತುತ ಖುದ್ದಾಗಿ ತಮ್ಮ ಪೀಠದ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಹೋಗಿ ಶಾಸನವನ್ನು ಸ್ವಚ್ಛಗೊಳಿಸಿ ಅದನ್ನು ಬೇರೆಡೆಗೆ ಸ್ಥಳಾಂತರ ಮಾಡಲು ಬಾರದಂತೆ ಉಸುಕು ಮತ್ತು ಸಿಮೆಂಟ್ ಬಳಸಿ ಶಾಶ್ವತವಾಗಿ ಸರೋವರದ ಆವರಣದಲ್ಲಿಯೇ ಪ್ರತಿಷ್ಠಾಪಿಸಿ ಸಂರಕ್ಷಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಸರೋವರದ ಬಳಿ ಇರುವ ಪುರಾತನ ಶ್ರೀವೃಷಣಧ್ವಜೇಶ್ವರ ಮಹಾದೇವ ಮಂದಿರದಲ್ಲಿನ ಶಿವಲಿಂಗಕ್ಕೆ ಕಾಶಿ ಪೀಠದ ಜಗದ್ಗುರುಗಳು ವಿಶೇಷ ಪೂಜೆ ಸಲ್ಲಿಸಿದರು.
ಕನ್ನಡದ ಜೊತೆಗೆ ಉರ್ದು ಹಾಗೂ ಹಿಂದಿ ಭಾಷೆಗಳನ್ನೂ ಸಹ ಈ ಶಾಸನ ಒಳಗೊಂಡಿದೆ. ಉತ್ತರಪ್ರದೇಶದಲ್ಲಿ ಹಿಂದಿಯೇ ಪ್ರಮುಖ ಭಾಷೆಯಾಗಿದ್ದು, 16ನೇ ಶತಮಾನದ ಸಂದರ್ಭದಲ್ಲಿ ಆ ಭಾಗದಲ್ಲಿ ಉರ್ದು ಭಾಷೆಯೂ ಸಹ ಜನಭಾಷೆಯಾಗಿ ಬಳಕೆಯಲ್ಲಿರಬಹುದಾದ ಸಾಧ್ಯತೆಯ ವಿಚಾರ ಈ ಶಾಸನದ ಲಿಪಿಯಿಂದ ವೇದ್ಯವಾಗುತ್ತದೆ. ಕಾಶಿ ಪೀಠದ ವ್ಯವಸ್ಥಾಪಕ ಶಿವಾನಂದ ಹಿರೇಮಠ, ಹಿರಿಯ ವಕೀಲ ಉದಯಭಾನ ಸಿಂಹ, ಎಂಜನೀಯರ್ ಅಶೋಕ ಪಾಂಡೆ ಇತರರು ಈ ಸಂದರ್ಭದಲ್ಲಿ ಇದ್ದರು.