ಕಾಪಸೆ ಜೀವನ ಎಲ್ಲರಿಗೂ ನಿದರ್ಶನ

29 vikram 5
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಜೀವನ ಹೇಗೆ ನಡೆಸಬೇಕು ಎಂಬುದಕ್ಕೆ ನಿದರ್ಶನವಾಗುವಂತೆ ದೇವರು ಕಾಪಸೆಯವರನ್ನು ಇಟ್ಟಿದ್ದ. ಎಲ್ಲ ದೈವಿ ಸಂಪತ್ತ ಗುಣಗಳನ್ನು ಹೊಂದಿದವರು ಕಾಪಸೆ. ಇಂತಹ ಜ್ಞಾನಿಗಳು, ಅನುಭಾವಿಗಳು, ಪಂಡಿತರಾಗಿ ನಮ್ಮ ನಡುವೆ ಇದ್ದರು ಎಂಬುದೇ ನಮ್ಮ ಸುದೈವ ಎಂದು ಸಾಹಿತಿ ಜಿ.ಸಿ. ತಲ್ಲೂರ ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂದಲ್ಲಿ ಗುರುವಾರ ಏರ್ಪಡಿಸಿದ್ದ ಹಿರಿಯ ಸಾಹಿತಿ ಡಾ. ಗುರುಲಿಂಗ ಕಾಪಸೆ ಅವರಿಗೆ ನುಡಿ ನಮನ ಸಮಾರಂಭದಲ್ಲಿ ಅವರು ಮಾತನಾಡಿದರು.
ನರಸಿಂಹ ಪರಾಂಜಪೆ ಮಾತನಾಡಿ, ಸರಳ ಸಜ್ಜನಿಕೆಯ ಮೂತಿರ್ಯಾಗಿದ್ದ ಇವರು ಶಿಷ್ಯರಿಗೆ ಅಮೃತ ಉಣಿಸಿದ ಗುರುವಾಗಿದ್ದರು. ಅವರಿಗೆ ಅವರೇ ಪ್ರತಿಮೆಯಾಗಿದ್ದರು. ಜ್ಞಾನ ತೀರ್ಥದ ಚಿಲುಮೆಯಾಗಿದ್ದರು ಎಂದರು.
ಶಾಮಸುಂದರ ಬಿದರಕುಂದಿ ಮಾತನಾಡಿ, ಕಾಪಸೆಯವರ ಜೀವನ ಸಂಕಲ್ಪದ ಜೀವನ. ಮಧುರ ಚೆನ್ನರು ಅವರ ಗುರುಗಳು. 40 ವರ್ಷಗಳ ಕಾಲ ಧಾರವಾಡದಲ್ಲಿ ನಮ್ಮ ನಡುವೆ ಇದ್ದುಕೊಂಡು ಪಾಂಡಿತ್ಯದ ಆಗರವಾಗಿದ್ದರು. ಕನ್ನಡ ಅಧ್ಯಯನಕ್ಕೆ ಬಹುದೊಡ್ಡ ಕೊಡುಗೆ ನೀಡಿದರು. ಮಧುರ ಚೆನ್ನರ ಹಾದಿಯಲ್ಲೇ ಸಾಗಿದವರು ಎಂದರು.
ಮೋಹನ ಲಿಂಬಿಕಾಯಿ ಮಾತನಾಡಿ, ಕಾಪಸೆಯವರು ಸರಳ ಮತ್ತು ಮಾನವತಾವಾದಿ. ಇನ್ನೊಬ್ಬರ ಬಗ್ಗೆ ಅಪಾರ ಕಾಳಜಿ ಹೊಂದಿದವರು. ಎಂದೂ ತಯಾರಿ ಇಲ್ಲದೆ ಪಾಠ ಹೇಳಲು ಬರುತ್ತಿದ್ದಿಲ್ಲ. ಯಾವುದಕ್ಕೂ ಆಸೆಪಟ್ಟವರಲ್ಲ. ಇತಿಮಿತಿಯಲ್ಲಿ ಜೀವನ ಸಾಗಿಸಿದವರು ಎಂದರು.
ನಿಂಗಣ್ಣ ಕುಂಟಿ, ಎಸ್​.ಜಿ. ಪಾಟೀಲ, ಸಿ.ಯು. ಬೆಳ್ಳಕ್ಕಿ, ಸಿ.ಚನ್ನಬಸಪ್ಪ, ವೆಂಕಟೇಶ ಮಾಚಕನೂರ, ಪ್ರೊ. ಮಾಲತಿ ಪಟ್ಟಣಶೆಟ್ಟಿ, ಶ್ರೀನಿವಾಸ ವಾಡಪ್ಪಿ, ಡಾ. ಮಹಾಂತೇಶ ರಾಮಣ್ಣವರ ನುಡಿನಮನ ಸಲ್ಲಿಸಿದರು.
ಸಂದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ, ಬಸವಪ್ರಭು ಹೊಸಕೇರಿ, ಶಂಕರ ಹಲಗತ್ತಿ, ಶಂಕರ ಕುಂಬಿ, ಡಾ. ಶೈಲಜಾ ಅಮರಶೆಟ್ಟಿ, ಡಾ. ಜಿನದತ್ತ ಹಡಗಲಿ. ಡಾ. ಮಹೇಶ ಹೊರಕೇರಿ, ಡಾ. ಧನವಂತ ಹಾಜವಗೋಳ, ಶಿವಾನಂದ ಭಾವಿಕಟ್ಟಿ, ಕೆ.ಎಚ್​.ನಾಯಕ, ಮಲ್ಲಿಕಾರ್ಜುನ ಚಿಕ್ಕಮಠ, ಅರವಿಂದ ಯಾಳಗಿ, ಬಿ.ಕೆ. ಹೊಂಗಲ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net