

ಉಡುಪಿ: ಬಿಲ್ಲಾಡಿ ಆತ್ಮಾನಂದ ಸರಸ್ವತಿ ಕಿರಿಯ ತಾಂತ್ರಿಕ ಮಹಾವಿದ್ಯಾಲಯ, ಯುವವಾಹಿನಿ ಘಟಕ, ಧರ್ಮಸ್ಥಳ ಶ್ರೀ ರಾಮಕ್ಷೇತ್ರ ಎಜುಕೇಶನಲ್ ಟ್ರಸ್ಟ್ ಸಹಯೋಗದೊಂದಿಗೆ ಇತ್ತೀಚೆಗೆ ಪ್ರಯಾಗರಾಜ್ನಲ್ಲಿ ನಡೆದ ಕುಂಭಮೇಳದಲ್ಲಿ ಜುನಾ ಅಖಾಡದ 1008 ಮಹಾಮಂಡಲೇಶ್ವರ ಪದವಿಯೊಂದಿಗೆ ಪಟ್ಟಾಭಿಷಿಕ್ತರಾದ ಕನ್ಯಾಡಿ ಮಹಾಸಂಸ್ಥಾನಮ್ನ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಅಭಿನಂದನಾ ಕಾರ್ಯಕ್ರಮ "ಮಹಾಭಿವಂದ್ಯ" ಮಾ.16ರಂದು ಸಾಯಂಕಾಲ 4 ಗಂಟೆಗೆ ಬನ್ನಂಜೆಯ ನಾರಾಯಣಗುರು ಆಡಿಟೋರಿಯಂನಲ್ಲಿ ನಡೆಯಲಿದೆ ಎಂದು ಯುವವಾಹಿನಿ ಉಡುಪಿ ಘಟಕದ ಅಧ್ಯಕ್ಷ ದಯಾನಂದ ಕರ್ಕೇರಾ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಕಾರ್ಯಕ್ರಮವನ್ನು ಉದ್ಯಮಿ ಡಾ.ಜಿ.ಶಂಕರ್ ಉದ್ಘಾಟಿಸಲಿದ್ದಾರೆ. ಆತ್ಮಾನಂದ ಸರಸ್ವತಿ ಕಿರಿಯ ತಾಂತ್ರಿಕ ಮಹಾವಿದ್ಯಾಲಯದ ಅಧ್ಯಕ್ಷ ಓಬು ಪೂಜಾರಿ ಅಧ್ಯಕ್ಷತೆ ವಹಿಸಲಿದ್ದಾರೆ. ಮಾಜಿ ಶಾಸಕ ರಘುಪತಿ ಭಟ್ ಅಭಿನಂದನಾ ಭಾಷಣ ಮಾಡಲಿದ್ದಾರೆ. ಮೀನುಗಾರಿಕಾ ಸಚಿವ ಮಾಂಕಾಳ ವೈದ್ಯ ಅಭಿನಂದನಾರ್ಪಣೆ ಮಾಡಲಿದ್ದಾರೆ. ಸಂಸದ ಕೋಟ ಶ್ರೀನಿವಾಸ್ ಪೂಜಾರಿ, ಶಾಸಕ ಯಶ್ಪಾಲ್ ಸುವರ್ಣ, ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್, ವಿನಯ್ ಕುಮಾರ್ ಸೊರಕೆ, ಕುದ್ರೋಳಿ ಗೋಕರ್ಣನಾಥ ದೇವಸ್ಥಾನ ಕೋಶಾಧಿಕಾರಿ ಪದ್ಮರಾಜ್ ಪೂಜಾರಿ, ಉದ್ಯಮಿ ಪ್ರಸಾದ್ ಕಾಂಚನ್ ಮೊದಲಾದವರು ಉಪಸ್ಥಿತರಿರಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಆತ್ಮಾನಂದ ಸರಸ್ವತಿ ಕಿರಿಯ ತಾಂತ್ರಿಕ ಮಹಾವಿದ್ಯಾಲಯದ ಅಧ್ಯಕ್ಷ ಓಬು ಪೂಜಾರಿ, ಯುವವಾಹಿನಿ ಉಡುಪಿ ಘಟಕದ ಮಾಜಿ ಅಧ್ಯಕ್ಷರಾದ ರಘುನಾಥ್ ಮಾಬಿಯಾನ್, ಭಾಸ್ಕರ್ ಸುವರ್ಣ, ಮಹಾಬಲ ಆಮೀನ್, ನಾರಾಯಣ ಬಿ.ಎಸ್. ಉಪಸ್ಥಿತರಿದ್ದರು.