

ಬೆಳ್ತಂಗಡಿ: ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನಂ ಜಗದ್ಗುರು ಪೀಠದ ಪೀಠಾಧೀಶ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಪಟ್ಟಾಭಿಷೇಕದ 15ನೇ ವರ್ಧಂತಿ ಸೆ.3ರಂದು ಗುರುದೇವ ಮಠದಲ್ಲಿ ನಡೆಯಲಿದೆ.
ದಕ್ಷಿಣದ ಅಯೋಧ್ಯೆ ಎಂದೇ ಖ್ಯಾತಿ ಪಡೆದ ಶ್ರೀರಾಮ ಕ್ಷೇತ್ರದ ನಿರ್ಮಾತೃ ಆತ್ಮಾನಂದ ಸರಸ್ವತಿ ಸ್ವಾಮೀಜಿಯವರ ಸಂಕಲ್ಪದಂತೆ ಬ್ರಹ್ಮಾನಂದ ಶ್ರೀಗಳು ವಿವಿಧ ಶಾಖಾ ಮಠಗಳನ್ನು ಸ್ಥಾಪಿಸಿ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ತಮ್ಮ ಪಟ್ಟಾಭಿಷೇಕದ ದಶಮಾನೋತ್ಸವ ಸಂದರ್ಭ ರಾಷ್ಟ್ರೀಯ ಧರ್ಮ ಸಂಸದ್ ಮೂಲಕ ಯಶಸ್ವಿ ಕಾರ್ಯಕ್ರಮ ಆಯೋಜಿಸಿ ಜನಮಾನಸದಲ್ಲಿ ಉಳಿಯುವಂತೆ ಮಾಡಿದ್ದಾರೆ. 4 ವರ್ಷಗಳಿಂದ ಶ್ರೀ ಗುರುದೇವ ಮಠದಲ್ಲಿ ಚಾತುರ್ಮಾಸ್ಯ ವ್ರತ ನಡೆಸುತ್ತಿದ್ದು, ಈ ವರ್ಷ ಜುಲೈ 3ರಿಂದ ಆ.31ರವರೆಗೆ 60 ದಿನಗಳ ಚಾತುರ್ಮಾಸ್ಯ ವ್ರತಾಚಾರಣೆಯಲ್ಲಿ ಪ್ರತಿ ಭಾನುವಾರ ಹೊರತುಪಡಿಸಿ 52 ದಿನ ಹಗಲು ಮೌನವ್ರತ ಆಚರಿಸಿದರು. ಚಾತುರ್ಮಾಸ್ಯ ಸಂದರ್ಭ ಯಕ್ಷಗಾನ, ತಾಳಮದ್ದಲೆ, ನಾಟಕ, ಭಗವತ್ ಸಪ್ತಾಹ ಸೇರಿದಂತೆ ವಿವಿಧ ಧಾರ್ಮಿಕ ಸಾಂಸ್ಕೃಕ ಕಾರ್ಯಕ್ರಮ ನಡೆಯಿತು.