

ಗದಗ: ಹಿಂದುಳಿದ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಕಾನೂನು ಅರಿವು ಮೂಡಿಸಬೇಕು. ಅರ್ಹ ಫಲಾನುಭವಿಗಳಿಗೆ ಸರ್ಕಾರದ ಯೋಜನೆಗಳು ತಲುಪುವಂತೆ ಸಮನ್ವಯಕಾರರಾಗಿ ಕಾರ್ಯನಿರ್ವಹಿಸಬೆಕೆಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಬಸವರಾಜ ತಿಳಿಸಿದರು.
ಗದಗ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ನ್ಯಾಯಾಲಯದ ಎ.ಡಿ.ಆರ್. ಕಟ್ಟಡದಲ್ಲಿ ಜರುಗಿದ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ ಹಾಗೂ ಗದಗ ಜಿಲ್ಲೆಯ ಎಲ್ಲಾ ಅರೆಕಾಲಿಕ ಸ್ವಯಂಸೇವಕರಿಗೆ ಗುರುವಾರದಂದು ಏರ್ಪಡಿಸಿದ ಒಂದು ದಿನದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ರಾಷ್ಟ್ರಮಟ್ಟದಿಂದ ಹಿಡಿದು ತಾಲೂಕಾ ಮಟ್ಟದವರೆಗೆ ಕಾನೂನು ಸೇವಾ ಪ್ರಾಧಿಕಾರ, ಸಮಿತಿಗಳು ಕಾರ್ಯನಿರ್ವಹಿಸುತ್ತಿದ್ದು, ನ್ಯಾಯಾಲಯಗಳಲ್ಲಿ ಪ್ರಕರಣ ದಾಖಲಿಸಿ ಪ್ರಕರಣ ನಡೆಸಲು ಆರ್ಥಿಕ ತೊಂದರೆ ಅನು¨Àsವಿಸುತ್ತಿರುವ ಜನರಿಗೆ ಉಚಿತ ಕಾನೂನು ಅರಿವು, ಸಲಹೆ ನೀಡುವುದರ ಜೊತೆಗೆ ಅವರ ಪ್ರಕರಣವನ್ನು ಉಚಿತವಾಗಿ ನಡೆಸಲು ಇರುವ ಪ್ರಾಧಿಕಾರದ ವ್ಯವಸ್ಥೆಯ ಬಗ್ಗೆ ಜನರಿಗೆ ಅರಿವು ಮೂಡಿಸಿ, ಸಮಾಜದ ಕಟ್ಟಕಡೆಯ ವ್ಯಕ್ತಿಗೆ, ಅಸಹಾಯಕರಿಗೆ ಉಚಿತ ಕಾನೂನು ಅರಿವು ಮತ್ತು ನೆರವು ತಲುಪುವಂತೆ ನೋಡಿಕೊಳ್ಳುವುದು ಪಿ.ಎಲ್.ವಿ.ಗಳ ಕರ್ತವ್ಯವಾಗಿದೆ ಎಂದು ನುಡಿದರು.
ಗದಗ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಎಮ್.ಐ.ಹಿರೇಮನಿ ಪಾಟೀಲ ಅವರು ಮಾತನಾಡಿ ನಮಗೆ ಸ್ವಾತಂತ್ರ್ಯ ಬರುವುದಕ್ಕಿಂತ ಪೂರ್ವದಲ್ಲಿ ಬ್ರಿಟೀಷರು ನಮ್ಮನ್ನು ಆಳುತ್ತಿದ್ದರು. ಆ ಸಮಯದಲ್ಲಿ ದುರ್ಬಲ ವರ್ಗದವರಿಗೆ ಬಡವರಿಗೆ ಅಶಕ್ತರಿಗೆ ತಮ್ಮ ಹಕ್ಕನ್ನು ಪ್ರತಿಪಾದಿಸಲು ಉಚಿತ ಕಾನೂನಿನ ವ್ಯವಸ್ಥೆ ಇರಲಿಲ್ಲ, ಸ್ವಾತಂತ್ರ್ಯ ಬಂದ ನಂತರ ನಮ್ಮ ಸಂವಿಧಾನದಲ್ಲಿ ಬಡವರಿಗೆ ದುರ್ಬಲ ವರ್ಗದವರಿಗೆ ಅಶಕ್ತರಿಗೆ, ಮಹಿಳೆಯರಿಗೆ ವಿಶೇಷ ಅವಕಾಶ ನೀಡಿ ಅವರಿಗೂ ಸಹ ಉಚಿತವಾಗಿ ಕಾನೂನು ಅರಿವು ನೆರವು ಒದಗಿಸಿದ್ದು, ಆ ನಿಮಿತ್ಯವಾಗಿ ಕಾನೂನು ಸೇವಾ ಪ್ರಾಧಿಕಾರ ಹಾಗೂ ಸಮಿತಿಗಳು ರಾಜೀ ಸಂಧಾನದ ಮೂಲಕ ಹಾಗೂ ಮಧ್ಯಸ್ಥಿಕೆಯ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸಿ ಅವಕಾಶ ಕಲ್ಪಿಸಿ ಕೊಡವುದು ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ಮುಖ್ಯ ಧ್ಯೇಯವಾಗಿ ಜಾರಿಗೆ ಬಂದಿದ್ದರಿಂದ ಸಮಾಜದಲ್ಲಿರುವ ಶೋಷಿತ ವರ್ಗಗಳವರಿಗೆ ಉಚಿತ ಕಾನೂನು ಸೇವೆ ಪಡೆಯುವಂತೆ ಜಾಗೃತಿ ಮೂಡಿಸಿ ಎಂದು ಕರೆ ನೀಡಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಕೆ.ಗುರುಪ್ರಸಾದ ಅವರು ಒಂದನೇ ಅಧಿವೇಶನದಲ್ಲಿ ‘‘ಕಾನೂನು ಸೇವೆಗಳ ಅಧಿನಿಯಮ 1987 ಹಾಗೂ ನಾಲ್ಸಾ ಯೋಜನೆಗಳು” ಕುರಿತು ಮಾತನಾಡಿದರು.
ಎರಡನೇ ಅಧಿವೇಶನದಲ್ಲಿ ಮುಖ್ಯ ಕಾನೂನು ನೆರವು ಅಭಿರಕ್ಷಕರಾದ ಎಸ್.ವಿ.ಗ್ರಾಮಪುರೋಹಿತ ವಕೀಲರು ಸಂವಿಧಾನದ ಮುಖ್ಯ ಅಂಶಗಳ ಕುರಿತು ವಿಷಯ ಮಂಡನೆ ಮಾಡಿದರು. ಮೂರನೇ ಅಧಿವೇಶನದಲ್ಲಿ ಸಹಾಯಕ ಕಾನೂನು ನೆರವು ಅಭಿರಕ್ಷಕರಾದ ಗುರುರಾಜ ಬಿ ಗೌರಿ ವಕೀಲರು ಸಾರ್ವಜನಿಕ ವಲಯದಲ್ಲಿ ಅರೇ ಕಾಲಿಕ ಕಾನೂನು ಸ್ವಯಂ ಸೇವಕರ ಪಾತ್ರ ಮತ್ತು ಅವರ ಕರ್ತವ್ಯಗಳ ಕುರಿತು ಉಪನ್ಯಾಸ ನೀಡಿದರು
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಶಿರಸ್ತೇದಾರರಾದ ಬಿ.ಎಂ.ಕುಕನೂರ ಅವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ತರಬೇತಿ ಕಾರ್ಯಕ್ರಮದಲ್ಲಿ ಜಿಲ್ಲೆಯ ಪಿ.ಎಲ್.ವಿ.ಗಳು ಭೌತಿಕವಾಗಿ ಹಾಗೂ ಹಾಗೂ ತಾಲೂಕಾಗಳಲ್ಲಿರುವ ಪಿ.ಎಲ್.ವಿ.ಗಳು ವರ್ಚ್ಯುವಲ್ ಮೂಲಕ ಪಾಲ್ಗೊಂಡು ತರಬೇತಿ ಕಾರ್ಯಾಗಾರ ಯಶಸ್ವಿಗೊಳಿಸಿದರು.