

ಮಂಡ್ಯ: ಕಾಂತರಾಜ್ ಆಯೋಗದ ವರದಿ ಸ್ವೀಕರಿಸಿ ಜಾರಿಗೊಳಿಸಬೇಕು. ಮುಸ್ಲಿಂ ಸಮುದಾಯದ 2ಬಿ ಮೀಸಲಾತಿ ಪ್ರಮಾಣವನ್ನು ಶೇ.8ಕ್ಕೆ ಹೆಚ್ಚಳ ಮಾಡಬೇಕು ಎಂದು ಒತ್ತಾಯಿಸಿ ನಗರದಲ್ಲಿ ಎಸ್‌ಡಿಪಿಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಸರ್‌ಎಂವಿ ಪ್ರತಿಮೆ ಎದುರು ಧರಣಿ ನಡೆಸಿದ ಕಾರ್ಯಕರ್ತರು, 2015ರಲ್ಲಿ ರಾಜ್ಯದಲ್ಲಿ 1.3 ಕೋಟಿ ಕುಟುಂಬಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿ ಸಮೀಕ್ಷೆ ಮಾಡಲಾಗಿದೆ. ಆದರೆ ಸಮೀಕ್ಷೆ ನಡೆಸಿದ ಕಾಂಗ್ರೆಸ್ ಸರ್ಕಾರ ವರದಿಯನ್ನು ಸ್ವೀಕಾರ ಮಾಡಲಿಲ್ಲ. ಆದ್ದರಿಂದ ವರದಿ ಸ್ವೀಕರಿಸಲು ಮುಂದಾಗಬೇಕಾಗಿದೆ ಎಂದು ಒತ್ತಾಯಿಸಿದರು.
ಹಿಂದುಳಿದ ವರ್ಗಗಳ ಆಯೋಗದ ಮೂಲಕ ವಿಶ್ವಾಸಾರ್ಹ ದತ್ತಾಂಶ ಆಧಾರಿತ ಮಾಹಿತಿಯನ್ನು ಮೂರು ಹಂತದ ಪರಿಶೀಲನೆಗೆ ಒಳಪಡಿಸಿ ಪ್ರತ್ಯೇಕ ರಾಜಕೀಯ ಮೀಸಲಾತಿ ರೂಪಿಸಬೇಕು ಎಂದು ಸರ್ವೋಚ್ಚ ನ್ಯಾಯಾಲಯ 2010ರಲ್ಲಿ ರಾಜ್ಯಗಳಿಗೆ ಆದೇಶ ನೀಡಿದೆ. ಹಾಗಾಗಿ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಕಾಂತರಾಜ್ ವರದಿ ಬಿಡುಗಡೆ ಮಾಡಬೇಕು. ಕಳೆದ ಬಿಜೆಪಿ ಸರ್ಕಾರ ಮುಸ್ಲಿಮರಿಗಿದ್ದ ಶೇ.4ರಷ್ಟು ಮೀಸಲಾತಿಯನ್ನು ರದ್ದುಮಾಡಿತ್ತು. ಸುಪ್ರೀಂ ಕೋರ್ಟ್ ಹಿಂದುಳಿದವರ ಮೀಸಲಾತಿಯಿಂದ ಮುಸ್ಲಿಂ ಸಮುದಾಯವನ್ನು ಕೈ ಬಿಟ್ಟಿರುವುದು ಸಂವಿಧಾನ ಬಾಹಿರ, ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಂತಿಮ ವರದಿ ಕಾಯದೇ ಮಧ್ಯಂತರ ವರದಿ ಆಧಾರದಲ್ಲಿ ಮೀಸಲಾತಿ ಹಿಂಪಡೆಯುವ ಅಗತ್ಯ ಏನಿತ್ತು ಎಂದು ಪ್ರಶ್ನಿಸಿತ್ತು. ಆದ್ದರಿಂದ ಮುಸ್ಲಿಂ ಸಮುದಾಯದ 2 ಬಿ ಮೀಸಲಾತಿ ರದ್ದತಿಯ ಬಿಜೆಪಿ ಸರ್ಕಾರದ ಶಿಫಾರಸನ್ನು ರದ್ದು ಮಾಡಿ ನ್ಯಾಯಾಲಯದಲ್ಲಿರುವ ದಾವೆಯನ್ನು ಹಿಂಪಡೆಯಬೇಕು. ರಾಜ್ಯದಲ್ಲಿ ಮುಸ್ಲಿಂ ಸಮುದಾಯದ ಜನಸಂಖ್ಯೆ ಶೇ.18ರಷ್ಟು ಇರುವುದರಿಂದ 2 ಬಿ ಮೀಸಲು ಪ್ರಮಾಣವನ್ನ ಶೇ 8ಕ್ಕೆ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲಾಧ್ಯಕ್ಷ ಸಾದತ್ ಪಾಷಾ, ಉಪಾಧ್ಯಕ್ಷ ಮುಬಾರಕ್, ಪ್ರಧಾನ ಕಾರ್ಯದರ್ಶಿ ಮುಕ್ತಾರ್ ಅಹಮದ್, ಅಜ್ಗರ್ ಅಹಮದ್, ಫಾರೂಕ್ ಇತರರಿದ್ದರು.