

ಶಿವಮೊಗ್ಗ: ನಾನು ಪಕ್ಷದ ಪ್ರಾಮಾಣಿಕ ಕಾರ್ಯಕರ್ತ. ಪಕ್ಷದ ಕೆಲಸಗಳನ್ನು ಇದುವರೆಗೂ ಮಾಡಿಕೊಂಡು ಬಂದಿದ್ದೇನೆ. ಎಲ್ಲಿಯೂ ನಾನು ವಿಧಾನಸಭಾ ಟಿಕೆಟ್ ಆಕಾಂಕ್ಷಿ ಎಂದು ಹೇಳಿಕೊಂಡಿಲ್ಲ. ಪಕ್ಷ ಹಾಗೂ ನನ್ನ ತಂದೆ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧ ಎಂದು ಕೆ.ಎಸ್.ಈಶ್ವರಪ್ಪ ಪುತ್ರ ಕೆ.ಇ.ಕಾಂತೇಶ್ ಹೇಳಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಣೆಬೆನ್ನೂರು ಕ್ಷೇತ್ರದ ಉಪಚುನಾವಣೆ ಸಂದರ್ಭದಲ್ಲಿ ಆ ಕ್ಷೇತ್ರದಿಂದ ನಾನು ಸ್ಪರ್ಧಿಸಲು ಬಯಸಿದ್ದೇನೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ವಾಸ್ತವದಲ್ಲಿ ಅಂತಹ ಯಾವುದೇ ಬಯಕೆ ನನಗೆ ಇರಲಿಲ್ಲ ಎಂದು ಸ್ಪಷ್ಟಪಡಿಸಿದರು.
ನಾನು ಚುನಾವಣಾ ರಾಜಕೀಯದಲ್ಲಿ ಸಕ್ರಿಯವಾಗಿ ಇರುವವರೆಗೂ ನನ್ನ ಪುತ್ರ ವಿಧಾನಸಭೆ ಪ್ರವೇಶಿಸುವುದಿಲ್ಲ ಎಂದು ತಂದೆಯವರು ಹೇಳಿದ್ದಾರೆ. ನನ್ನ ಮುಂದಿನ ರಾಜಕೀಯ ಭವಿಷ್ಯವನ್ನು ಪಕ್ಷದ ನಾಯಕರು, ನನ್ನ ತಂದೆ ನಿರ್ಧರಿಸುತ್ತಾರೆ. ನಮ್ಮದು ಶಿಸ್ತಿನ ಪಕ್ಷ. ನಾಯಕರ ಆದೇಶ ಪಾಲಿಸುವುದಷ್ಟೇ ನನ್ನ ಕೆಲಸ ಎಂದರು.