

ಬೆಳಗಾವಿ: ಜಾತಿ ಗಣತಿ (ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ) ಮಾಡಬೇಕಾದರೆ ಮನೆ ಮನೆಗೆ ತೆರಳಿ ಮಾಹಿತಿ ಸಂಗ್ರಹಿಸಬೇಕು. ಆದರೆ, ಎಚ್.ಕಾಂತರಾಜ ಆಯೋಗ ಮನೆಮನೆಗೆ ತೆರಳದೆ, ಸಾಮೂಹಿಕವಾಗಿ ಕೆಲವೇ ಜನರ ಅಭಿಪ್ರಾಯ ಸಂಗ್ರಹಿಸಿ ಸಮೀಕ್ಷೆ ಕೈಗೊಂಡಿದೆ. ಹೀಗಾಗಿ ಆಯೋಗದ 2015ರ ಜಾತಿ ಗಣತಿ ವರದಿ ಅವೈಜ್ಞಾನಿಕವಾಗಿದೆ. ರಾಜ್ಯ ಸರ್ಕಾರ ಅದನ್ನು ಪುನರ್ ಪರಿಶೀಲಿಸಬೇಕು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಒತ್ತಾಯಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾದರಿಗಳ ಆಧಾರದ ಮೇಲೆ ಮಾಡಿರುವ ಈ ಸಮೀಕ್ಷೆಯನ್ನು ಜಾತಿ ಗಣತಿ ಎಂದು ಹೇಳುವುದಕ್ಕೆ ಆಗುವುದಿಲ್ಲ. ಈ ವರದಿಯಲ್ಲಿ ಬಹಳಷ್ಟು ಗೊಂದಲಗಳಿವೆ. ಇದನ್ನು ಜಾರಿಗೊಳಿಸುವ ಮುನ್ನ ಮರುಪರಿಶೀಲನೆ ಮಾಡಬೇಕು ಎಂದರು.
ಯಾರೂ ವಿರೋಧಿಸಿಲ್ಲ: ಕಾಂಗ್ರೆಸ್ ಸರ್ಕಾರ ಪತನವಾದರೂ ಪರವಾಗಿಲ್ಲ. ಆದರೆ, ಈ ಜಾತಿ ಗಣತಿ ವರದಿ ಜಾರಿಗೊಳಿಸಬೇಕು ಎಂದು ಕಾಂಗ್ರೆಸ್‌ನ ನಾಯಕ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ. ಈ ವರದಿ ಸಿದ್ಧಪಡಿಸಲು 170 ಕೋಟಿ ರೂ. ವೆಚ್ಚವಾಗಿದೆ. ಇದನ್ನು ಜಾರಿಗೊಳಿಸದಿದ್ದರೆ ಎಲ್ಲವೂ ವ್ಯರ್ಥವಾಗುತ್ತದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದ್ದಾರೆ. ಜಾತಿ ಗಣತಿಯನ್ನು ಯಾವುದೇ ರಾಜಕೀಯ ಪಕ್ಷ, ಯಾವುದೇ ಮಠಾಧೀಶರು ವಿರೋಧಿಸಿಲ್ಲ. ಆದರೆ, 9 ವರ್ಷಗಳ ಹಿಂದಿನ ವರದಿಯನ್ನು ಯಥಾವತ್ತಾಗಿ ಸ್ವೀಕರಿಸಿ ಜಾರಿಗೊಳಿಸುವುದು ಸರಿಯಾದ ಕ್ರಮವಲ್ಲ ಎಂದರು.
ಅಹವಾಲು ಆಲಿಸದೇ ಜಾರಿ ಸರಿಯಲ್ಲ: 2016ರಲ್ಲೇ ಈ ಸಮೀಕ್ಷೆ ಸಿದ್ಧಗೊಂಡಿದೆ. ಆದರೆ, ಮಾಹಿತಿ ಅಸ್ಪಷ್ಟವಾಗಿರುವ ಕಾರಣ ಆಗ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಇದನ್ನು ಜಾರಿಗೊಳಿಸಲಿಲ್ಲ. ನಂತರ ಮುಖ್ಯಮಂತ್ರಿಗಳಾಗಿದ್ದ ಎಚ್.ಡಿ.ಕುಮಾರಸ್ವಾಮಿ, ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅವರೂ ಜಾರಿಗೊಳಿಸಲಿಲ್ಲ. ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸಮೀಕ್ಷೆ ವರದಿ ಬಹಿರಂಗಪಡಿಸದೆ ಮತ್ತು ಸಾರ್ವಜನಿಕರ ಅಹವಾಲು ಆಲಿಸದೆ ಜಾರಿಗೊಳಿಸಲು ಮುಂದಾಗಿರುವುದು ಸರಿಯಲ್ಲ ಎಂದು ಹೇಳಿದರು.
ವೈಜ್ಞಾನಿಕವಾಗಿ ಜಾತಿಗಣತಿ ಮಾಡಿ: ಕೇಂದ್ರ ಸರ್ಕಾರವು ಜನಗಣತಿ ಮಾಡಲು 2024ರ ಸೆಪ್ಟೆಂಬರ್‌ನಲ್ಲಿ ಒಪ್ಪಿಗೆ ನೀಡಿದೆ. ಶೀಘ್ರವೇ ಈ ಪ್ರಕ್ರಿಯೆ ಆರಂಭವಾಗಲಿದ್ದು, ಆಗ ಜನಗಣತಿಯೊಂದಿಗೆ, ವೈಜ್ಞಾನಿಕವಾಗಿ ಜಾತಿಗಣತಿಯನ್ನೂ ಮಾಡಬೇಕು ಎಂದು ಮನವಿ ಮಾಡಿದರು.
ಜನಗಣತಿ ಮಾಡುವ ವೇಳೆ ಜಾತಿ, ಉಪಜಾತಿಗಳನ್ನು ಆಧಾರ್ ಕಾರ್ಡ್‌ನಲ್ಲಿ ದಾಖಲಿಸುವುದರಿಂದ ಸರ್ಕಾರಕ್ಕೆ ಸಂಪೂರ್ಣವಾದ ಮಾಹಿತಿ ಲಭ್ಯವಾಗುತ್ತದೆ. ಇದರ ಆಧಾರದ ಮೇಲೆ ಯೋಜನೆಗಳನ್ನು ರೂಪಿಸುವುದಕ್ಕೆ ಅನುಕೂಲವಾಗಲಿದೆ. ಈ ಬಗ್ಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಲಾಗುವುದು ಎಂದರು.
ವಕೀಲ ಎಂ.ಬಿ. ಝೀರಲಿ ಮಾತನಾಡಿ, ವಿರೋಧ ನಡುವೆಯೂ ವರದಿ ಜಾರಿಯಾದರೆ ಕಾನೂನಾತ್ಮಕ ಹೋರಾಟ ನಡೆಸಲಾಗುವುದು ಎಂದರು. ಮುಖಂಡರಾದ ರತ್ನಪ್ರಭಾ ಬೆಲ್ಲದ, ಬಸವರಾಜ ರೊಟ್ಟಿ, ಬಿ.ಎಂ.ಚಿಕ್ಕನಗೌಡರ, ಶಂಕರಗೌಡ ಪಾಟೀಲ ಸುದ್ದಿಗೋಷ್ಠಿಯಲ್ಲಿದ್ದರು.
ಎಚ್.ಕಾಂತರಾಜ ಆಯೋಗ ವರದಿಯಲ್ಲಿನ ಗೊಂದಲಗಳನ್ನು ನಿವಾರಿಸಬೇಕು ಮತ್ತು ವರದಿಯನ್ನು ಸಂಪೂರ್ಣವಾಗಿ ಮರುಪರಿಶೀಲಿಸಬೇಕು ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಹಾಗೂ ಜಾಗತಿಕ ಲಿಂಗಾಯತ ಸಂಘಟನೆಯಿಂದ ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತೇವೆ. ಪೂರ್ವಭಾವಿಯಾಗಿ ಅ.22ರಂದು ಬೆಂಗಳೂರಿನಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ನೇತೃತ್ವದಲ್ಲಿ ಸಭೆ ಆಯೋಜಿಸಿದ್ದು, ಅಲ್ಲಿ ಸಮಗ್ರವಾಗಿ ಚರ್ಚಿಸಿ ಅಂತಿಮ ತೀರ್ಮಾನಕ್ಕೆ ಬರಲಾಗುವುದು. ಈ ಸಭೆಯಲ್ಲಿ ಸಮುದಾಯದ ಮುಖಂಡರು, ಮಠಾಧೀಶರು ಮತ್ತು ಚಿಂತಕರು ಪಾಲ್ಗೊಳ್ಳಬೇಕು ಎಂದು ಮಹಾಂತೇಶ ಕವಟಗಿಮಠ ಮನವಿ ಮಾಡಿದರು.