

ಹುಬ್ಬಳ್ಳಿ : ಗುರುವಾರ ಬಿಡುಗಡೆಗೊಂಡಿರುವ ಬಹು ನಿರೀಕ್ಷಿತ ‘ಕಾಂತಾರ: ಚಾಪ್ಟರ್ 1’ ಕನ್ನಡ ಚಲನಚಿತ್ರಕ್ಕೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಮಲ್ಟಿಪ್ಲೆಕ್ಸ್ನಲ್ಲಿ ಬೆಳಗ್ಗೆ 7.50ಕ್ಕೆ ಆಸನಗಳೆಲ್ಲ ಭರ್ತಿಯಾಗಿದ್ದವು. ಹುಬ್ಬಳ್ಳಿಯ ಅಪ್ಸರಾ ಮತ್ತು ಸುಧಾ ಚಿತ್ರಮಂದಿರಗಳಲ್ಲಿ ತಲಾ 4 ಪ್ರದರ್ಶನಗಳಂತೆ ಒಟ್ಟು 8 ಪ್ರದರ್ಶನಗಳನ್ನು ಕಂಡಿವೆ. ಮಲ್ಟಿಪ್ಲೆಕ್ಸ್ ಪಿವಿಆರ್ನಲ್ಲಿ ಕನ್ನಡ ಭಾಷೆಯ 18 ಸ್ಕ್ರೀನ್ ಹಾಗೂ ಹಿಂದಿಯಲ್ಲಿ ಒಂದು ಸ್ಕೀನ್ನಲ್ಲಿ ಚಿತ್ರ ಪ್ರದರ್ಶನಗೊಳ್ಳುತ್ತಿದೆ. ಗೋಕುಲ ರಸ್ತೆಯ ಸಿನಿಪೊಲಿಸ್ನಲ್ಲಿ 8 ಸ್ಕ್ರೀನ್ನಲ್ಲಿ ಕನ್ನಡ ಹಾಗೂ ಒಂದು ಸ್ಕ್ರೀನ್ನಲ್ಲಿ ಹಿಂದಿ ಭಾಷೆಯಲ್ಲಿ ಚಿತ್ರ ಪ್ರದರ್ಶನಗೊಳ್ಳುತ್ತಿದೆ.
ದಸರಾ ಹಬ್ಬದ ಮಧ್ಯೆಯೇ ಹುಬ್ಬಳ್ಳಿ ಹಾಗೂ ಸುತ್ತಲಿನ ಚಿತ್ರರಸಿಕರು ಕಾಂತಾರ : ಚಾಪ್ಟರ್ 1 ಬಿಡುಗಡೆಗೊಂಡ ಮೊದಲ ದಿನವೇ ವೀಕ್ಷಿಸಿ, ಸಂತಸಪಟ್ಟಿದ್ದಾರೆ. ಸ್ನೇಹಿತರು, ಕುಟುಂಬದವರೊಂದಿಗೆ ಚಿತ್ರ ವೀಕ್ಷಿಸಿರುವ ಅನೇಕರು, ಚಿತ್ರಮಂದಿರಗಳಲ್ಲಿ ಕಾಂತಾರ : ಚಾಪ್ಟರ್ 1ರ ಪೋಸ್ಟರ್ ಎದುರು ನಿಂತು, ಸೆಲ್ಪಿ ಹಾಗೂ ಫೋಟೊಗಳನ್ನು ತೆಗೆದುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾರೆ. ಚಿತ್ರಮಂದಿರ ಹಾಗೂ ಮಲ್ಟಿಪ್ಲೆಕ್ಸ್ಗಳ ಸ್ಕ್ರೀನ್ಗಳು ಪ್ರೇಕ್ಷಕರಿಂದ ತುಂಬಿದ್ದವು. ರಿಷಬ್ ಶೆಟ್ಟಿಯ ನಟನೆ, ದೈವಗಳು ಹಾಗೂ ಇನ್ನಿತರ ದೃಶ್ಯಗಳನ್ನು ಮೆಲುಕು ಹಾಕುತ್ತ ಪ್ರೇಕ್ಷಕರು ಚಿತ್ರಮಂದಿರಗಳಿಂದ ಹೊರಬರುತ್ತಿರುವುದು ಕಂಡುಬಂದಿತು.